ನಿರ್ಭಯ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ತಾಂತ್ರಿಕ ದೋಷದಿಂದ ವಿಫಲ

ಹೊಸದಿಲ್ಲಿ,ಅ.12: ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಸೋಮವಾರ ಕೈಗೊಂಡಿದ್ದ 1,000 ಕಿ.ಮೀ.ವ್ಯಾಪ್ತಿಯ ಸಬಸಾನಿಕ್ ದಾಳಿ ಕ್ಷಿಪಣಿ ‘ನಿರ್ಭಯ’ದ ಪರೀಕ್ಷಾರ್ಥ ಉಡಾವಣೆಯು ತಾಂತ್ರಿಕ ದೋಷದಿಂದಾಗಿ ವಿಫಲಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಳಿಗ್ಗೆ 10:30ಕ್ಕೆ ಒಡಿಶಾದ ಬಾಲಸೋರ್‌ನ ಸಮಗ್ರ ಪರೀಕ್ಷಾ ವಲಯದಿಂದ ಪರೀಕ್ಷಾರ್ಥ ಉಡಾವಣೆಗೊಳಿಸಲಾಗಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಕ್ಷಿಪಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಉಡಾವಣೆ ವಿಫಲಗೊಂಡಿದೆ. ಡಿಆರ್‌ಡಿಒ ಈ ಬಗ್ಗೆ ವಿವರಗಳನ್ನು ವಿಶ್ಲೇಷಿಸುತ್ತಿದೆ ಎಂದೂ ಅವು ತಿಳಿಸಿದವು.
ಡಿಆರ್‌ಡಿಒ 2014,ಸೆಪ್ಟೆಂಬರ್‌ನಿಂದ ನಿರ್ಭಯ ಕ್ಷಿಪಣಿಯ ಹಲವಾರು ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ.
ಬಹು ವೇದಿಕೆಗಳಿಂದ ಉಡಾವಣೆಗೊಳಿಸಬಹುದಾದ ಅತ್ಯಾಧುನಿಕ ನಿರ್ಭಯ ಕ್ಷಿಪಣಿಯು ಶಬ್ದಕ್ಕಿಂತ ಕಡಿಮೆ ವೇಗವನ್ನು ಹೊಂದಿದೆ. ಕಳೆದ ಕೆಲವು ವಾರಗಳಲ್ಲಿ ಭಾರತವು ‘ಬ್ರಹ್ಮೋಸ್’ನ ನೂತನ ಆವೃತ್ತಿ,ಟ್ಯಾಂಕ್ ನಿರೋಧಕ ಮತ್ತು ಪರಮಾಣು ಸಾಮರ್ಥ್ಯದ ‘ಶೌರ್ಯ’ ಹಾಗೂ ವಿಕಿರಣ ನಿರೋಧಕ ‘ರುದ್ರಂ-1’ ಸೇರಿದಂತೆ ಹಲವಾರು ಕ್ಷಿಪಣಿಗಳ ಯಶಸ್ವಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿದೆ.







