ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಮೈಕ್ರೋ ಎಟಿಎಂ ವ್ಯವಸ್ಥೆ
ಬಡ ಕುಟುಂಬಗಳ ಆರ್ಥಿಕಾಭಿವೃದ್ದಿಯಲ್ಲಿ ದಿಟ್ಟಹೆಜ್ಜೆ: ಶಾಸಕ ಶ್ರೀನಿವಾಸಗೌಡ ಶ್ಲಾಘನೆ
ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಬ್ಯಾಂಕ್ ವಹಿವಾಟಿಗೆ ಮೈಕ್ರೊ ಎಟಿಎಂ ವ್ಯವಸ್ಥೆ ಜಾರಿಗೆ ತಂದಿರುವ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಬಡ ಕುಟುಂಬಗಳ ಆರ್ಥಿಕಾಭಿವೃದ್ದಿಗೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಮೊದಲ ಬಾರಿಗೆ ಮೈಕ್ರೋ ಎಟಿಎಂ ಮೂಲಕ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಅಣ್ಣಿಹಳ್ಳಿ ಸೊಸೈಟಿನಿರ್ದೇಶಕನಿಂದ ಆರಂಭಗೊಂಡ ಸಹಕಾರಿ ಕ್ಷೇತ್ರದ ಪ್ರಯಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ್ದರೂ ಕೋಲಾರ ಡಿಸಿಸಿ ಬ್ಯಾಂಕ್‍ನ ಅದ್ಭುತ ಸಾಧನೆಗಳನ್ನು ಮತ್ತೆಲ್ಲಿಯೂ ನೀಡಲು ಸಾಧ್ಯವಾಗಿಲ್ಲ. ಡಿಸಿಸಿ ಬ್ಯಾಂಕ್ ಮೈಕ್ರೋ ಎಟಿಎಂ ಐತಿಹಾಸಿಕ ಕ್ರಮ ಎಂದರು.
ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ದೂರದೃಷ್ಟಿಯ ಪ್ರಯತ್ನ ಇದಾಗಿದ್ದು, ಇದು ರಾಜ್ಯದ ಇತರೆ ಡಿಸಿಸಿ ಬ್ಯಾಂಕುಗಳಿಗೂ ಆದರ್ಶವಾಗಲಿದೆ ಎಂದು ತಿಳಿಸಿ, ಯಾರೂ ಊಹಿಸದ ರೀತಿಯಲ್ಲಿ ಮಹಿಳೆಯರು, ರೈತರಿಗೆ ಸಾಲ ವಿತರಿಸುತ್ತಿರುವುದರ ಹಿಂದೆ ಅವರ ಪರಿಶ್ರಮ ಇದೆ ಎಂದರು.
ಪ್ರತಿ ಕುಟುಂಬಕ್ಕೂ ಮೈಕ್ರೋ ಎಟಿಎಂ ಕಾರ್ಡ್
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಪ್ರತಿ ಕುಟುಂಬಕ್ಕೂ ಬ್ಯಾಂಕ್ ಖಾತೆ ತೆರೆಸುವುದು ನಬಾರ್ಡ್ ಧ್ಯೇಯವಾಗಿದ್ದು ಈ ಹಿನ್ನೆಲೆಯಲ್ಲಿ ಬ್ಯಾಂಕ್ 6.27 ಲಕ್ಷ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೂ ಮೈಕ್ರೋ ಎಟಿಎಂ ಕಾರ್ಡ್ ವಿತರಿಸುತ್ತಿದ್ದು, ಇಂದು ವರ್ಷದಲ್ಲಿ ಗುರಿ ಸಾಧನೆ ಆಗಲಿದೆ ಎಂದು ತಿಳಿಸಿದರು.
ನಬಾರ್ಡ್ ಸಲಹೆ ಮತ್ತು ನೆರವಿನಿಂದ ಮೈಕ್ರೋ ಎಟಿಎಂ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು ಇದರಿಂದಾಗಿ ಕಿಂಚಿತ್ತೂ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಸಾಲ ನೀಡಿಕೆ ಮತ್ತು ಮರುಪಾವತಿ, ಠೇವಣಿ ಸಂಗ್ರಹದಲ್ಲಿ ಪಾರದರ್ಶಕತೆಗೆ ಅವಕಾಶವಾಗಲಿದ್ದು, ಹಣ ಪಾವತಿಸುವ ತಾಯಂದಿರಿಗೆ ಸ್ಥಳದಲ್ಲೇ ಸ್ವೀಕೃತಿ ಸಿಗಲಿದೆ ಎಂದರು.
ಸಹಕಾರಿ ಬ್ಯಾಂಕ್ ಸೇವೆಯನ್ನು ಪ್ರತಿ ಕುಟುಂಬಕ್ಕೂ ತಲುಪಿಸುವ ಮೂಲಕ ಜನಸ್ನೇಹಿಯನ್ನಾಗಿಸುವುದು ಡಿಸಿಸಿ ಬ್ಯಾಂಕ್ ಆಶಯವಾಗಿದ್ದು ಶೋಕಿಗಾಗಿ ಅಧಿಕಾರ ಮಾಡುತ್ತಿಲ್ಲ ಎಂದರು.
ಅಧಿಕಾರ ಬಂದಾಗ ಜನಸೇವೆ ಮಾಡಬೇಕು. ಹೀಗಾಗಿ ಬ್ಯಾಂಕ್ ವಿರುದ್ಧದ ಟೀಕೆ-ಟಿಪ್ಪಣಿಗಳಿಗೆ ತಾಯಂದಿರು ಈಗಾಗಲೇ ಉತ್ತರ ನೀಡಿದ್ದು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುತ್ತಿರುವ ಸಾಲವನ್ನು ಒಂದು ಲಕ್ಷ ರೂ. ವರೆಗೆ ಏರಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಕ್ಷ, ಜಾತಿ, ಲಿಂಗ ಎಲ್ಲವನ್ನೂ ಬದಿಗಿಟ್ಟು ಬ್ಯಾಂಕ್ ಸೇವೆ ಮಾಡುತ್ತಿದ್ದು ಹೆಣ್ಣು ಮಕ್ಕಳ ಬಡತನ ನಿವಾರಣೆ ನಮ್ಮ ಆದ್ಯತೆ ಮತ್ತು ಗುರಿಯಾಗಿದೆ. ಬ್ಯಾಂಕ್ ವಿರುದ್ಧ ಹಲಗೆ, ತಮಟೆ ಹಾಕಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಜಿಲ್ಲೆಯ ಧುರೀಣರಾದನ ರಮೇಶ್ ಕುಮಾರ್, ಶ್ರೀನಿವಾಸಗೌಡರ ಅನುಯಾಯಿಗಳಾದ ನಾವು ತಪ್ಪು ಮಾಡುವುದಿಲ್ಲ. ಬ್ಯಾಂಕಲ್ಲಿ ಲೋಪ ಆದರೆ ನಾಗಿರೆಡ್ಡಿ ಅವರ ಹೆಸರಿಗೆ ಕಳಂಕ ಬರುತ್ತದೆ ಎಂಬ ಅರಿವು ನಮಗಿದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡರು ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸ್ತ್ರೀ ಶಕ್ತಿ ಮಹಿಳೆಯರಿಗೆ ಮನೆ ಬಾಗಿಲಲ್ಲೇ ಸೇವೆ ನೀಡಲು ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೆ ತರಲಾಗಿದ್ದು ತಾಯಂದಿರು ಹಳ್ಳಿಯಿಂದಲೇ ಹಣ ಕಟ್ಟಬಹುದು ಮತ್ತು ಹಣವನ್ನು ತೆಗೆಯಬಹುದು. ಡಿಸಿಸಿ ಬ್ಯಾಂಕ್ ಎಟಿಎಂ ಕಾರ್ಡ್ ಹೊಂದಿರುವ ಯಾವುದೇ ಗ್ರಾಹಕರೂ ಸಹಾ ಮೈಕ್ರೋ ಎಟಿಎಂ ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿನ ಒಂದು ಲಕ್ಷ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್‍ನಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಪ್ರಾಯೋಗಿಕ ಯೋಜನೆಯನ್ನು ರೂಪಿಸಲಾಗಿದ್ದು ಇದರ ಪ್ರಯೋಜನವನ್ನು ಎಲ್ಲ ಮಹಿಳೆಯರು ಪಡೆದುಕೊಳ್ಳಲು ಮುಂದಾಗಬೆಕೆಂದು ಸೂಚಿಸಿದರು.
ದಿವಾಳಿಯಾಗಿದ್ದ ಬ್ಯಾಂಕನ್ನು ಪುನಃ ಕಟ್ಟುವ ಮೂಲಕ ಲಾಭದತ್ತ ನಡೆಸಿದ ಬ್ಯಾಲಹಳ್ಳಿ ಗೋವಿಂದಗೌಡರು ಬ್ಯಾಂಕಿನ ಅಧ್ಯಕ್ಷರಲ್ಲ, ಬ್ಯಾಂಕಿನ ಕಾವಲುಗಾರನಾಗಿ 1500 ಕೋಟಿ ರೂ. ಸಾಲ ನೀಡುವ ಮೂಲಕ ಬದ್ಧತೆ ಮೆರೆದಿದ್ದು ಸಾಧನೆಗಳ ಸರಮಾಲೆಯನ್ನೇ ಮೆರೆದಿದ್ದಾರೆ. ಟೀಕೆಗಳಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡಿರುವ ಗೋವಿಂದಗೌಡರ ನಿಲುವು ಮೌನಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.
ಬ್ಯಾಂಕಿನ ನಿರ್ದೇಶಕ ದಯಾನಂದ್ ಮಾತನಾಡಿ, ಮಹಿಳೆಯರು ತಮ್ಮಲ್ಲಿನ ಹೆಚ್ಚುವರಿ ಹಣವನ್ನು ಡಿಸಿಸಿ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಠೇವಣಿ ಇಡುವ ಮೂಲಕ ಸಹಕಾರಿ ಸಂಸ್ಥೆಯ ಉನ್ನತಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಬ್ಯಾಂಕಿನ ನಿರ್ದೇಶಕ ಸೊಣ್ಣೇಗೌಡ, ಮಹಿಳೆಯರು ಬ್ಯಾಂಕ್ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಿ, ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಮೂರಾಂಡಹಳ್ಳಿ ಗೋಪಾಲ್,ಉರಿಗಿಲಿ ರುದ್ರಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್,ಮುಖಂಡ ರಾಮಣ್ಣ, ಅಣ್ಣಿಹಳ್ಳಿ ನಾಗರಾಜ್ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಕೆಯುಡಿಎ ಸದಸ್ಯ ಸತ್ಯನಾರಾಯಣರಾವ್ ಮತ್ತಿತರರಿದ್ದರು.







