ಡಾ.ಟಿ.ಎಂ.ಎ.ಪೈ, ಮಲ್ಪೆ ಮಧ್ವರಾಜ್, ನಾರಾಯಣ ಭಟ್ ಸ್ಮಾರಕ: 41ನೇ ರಂಗಭೂಮಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ
ಉಡುಪಿ, ಅ.13:ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ರಂಗಭೂಮಿ ಉಡುಪಿ, ತನ್ನ 55ನೇ ವರ್ಷದಲ್ಲಿ ಇದೇ ಡಿಸೆಂಬರ್ ತಿಂಗಳ 3 ಅಥವಾ 4ನೇ ವಾರದಲ್ಲಿ ಡಾ.ಟಿ.ಎಂ.ಎ.ಪೈ, ಮಲ್ಪೆ ಮಧ್ವರಾಜ್ ಮತ್ತು ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 41ನೇ ಕನ್ನಡ ನಾಟಕ ಸ್ಪರ್ಧೆಯನ್ನು ಈ ಬಾರಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲಿದೆ.
ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಠ ಒಂದೂವರೆ ಗಂಟೆಯಿಂದ ಗರಿಷ್ಠ ಎರಡೂಕಾಲು ಗಂಟೆ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ಕನ್ನಡ ನಾಟಕವನ್ನು ಪ್ರದರ್ಶನ ಮಾಡಬಹುದು. ಕೊರೋನಾ ಸಮಸ್ಯೆಯಿಂದಾಗಿ ಈ ಬಾರಿ ಸ್ಪರ್ಧೆಗೆ ಗರಿಷ್ಠ 7 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ. 35,000, ರೂ.25,000, ರೂ.15,000ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ಹಾಸ್ಯ ಪಾತ್ರಗಳಿಗೂ ನಗದು ಸಹಿತ ಬಹುಮಾನ ನೀಡಲಾಗುವುದು.
ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕನಿಷ್ಠ ರೂ. 1500ರಿಂದ, ಗರಿಷ್ಠ 10,000ರೂ. ಪ್ರಯಾಣ ವೆಚ್ಚವನ್ನು ನೀಡಲಾಗುವುದು.
ಭರ್ತಿ ಮಾಡಿದ ಪ್ರವೇಶ ಪತ್ರವನ್ನು ಸ್ವೀಕರಿಸಲು ನವಂಬರ್ 4 ಕೊನೆಯ ದಿನವಾಗಿರುತ್ತದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, ‘ರಂಗಭೂಮಿ’, ಕುತ್ಪಾಡಿ, ಉಡುಪಿ- 574118 ಇವರಿಗೆ ಬರೆಯಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9448952847(ಪ್ರದೀಪ್‌ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷರಾದ ನಂದ ಕುಮಾರ್ ಎಂ. (9980524431) ಹಾಗೂ ಭಾಸ್ಕರ ರಾವ್ ಕಿದಿಯೂರು (9844742166) ಇವರನ್ನು ಸಂಪರ್ಕಿಸಬಹುದು.
ಅದೇ ರೀತಿ ಸ್ಪರ್ಧೆ ನಡೆಯುವ ಸಮಯದಲ್ಲಿ ಸರಕಾರದ ಕೋವಿಡ್-19ರ ಮಾರ್ಗಸೂಚಿ/ನಿಬಂಧನೆಗಳಲ್ಲಿ ಬದಲಾವಣೆಗಳಾದಲ್ಲಿ ಅದಕ್ಕೆ ತಮ್ಮ ಸಂಸ್ಥೆಯು ಬದ್ಧವಾಗಿರುತ್ತದೆ ಎಂದು ರಂಗಭೂಮಿ ಪ್ರಕಟಣೆ ತಿಳಿಸಿದೆ.







