ಉಡುಪಿ: ದಿನವಿಡಿ ಸುರಿದ ಮಳೆ
ಉಡುಪಿ, ಅ.13: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ಉಡುಪಿ ಜಿಲ್ಲೆಯಾದ್ಯಂತ ಇಂದು ದಿನವಿಡೀ ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಚಳಿಯ ವಾತಾವರಣ ಕಂಡುಬಂದಿದೆ. ಆದರೆ ಮಳೆ ಕಳೆದ ತಿಂಗಳು ಸುರಿದಂತೆ ಭಾರೀ ಪ್ರಮಾಣದಲ್ಲಿ ಸುರಿಯಲಿಲ್ಲ.
ಮಂಗಳವಾರ ಬೆಳಗ್ಗೆ ಮಳೆ ಜೋರಾಗಿ ಸುರಿದರೆ, ನಂತರ ಬಿಟ್ಟು ಬಿಟ್ಟು ಮಳೆ ಸುರಿಯಿತು. ದಿನವಿಡೀ ಮೋಡ ಕವಿದ ವಾತಾವರಣವಿತ್ತು.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 35 ಮಿ.ಮೀ. ಮಳೆ ಸುರಿದಿದೆ. ಕಾರ್ಕಳದಲ್ಲಿ ಅತ್ಯಧಿಕ 55ಮಿ.ಮೀ. ಮಳೆ ಸುರಿದರೆ, ಉಡುಪಿಯಲ್ಲಿ 38.3ಮಿ.ಮೀ. ಹಾಗೂ ಕುಂದಾಪುರದಲ್ಲಿ 19ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಸತತ ಮಳೆಯಿಂದ ಬ್ರಹ್ಮಾವರ ತಾಲೂಕು ಕೆಂಜೂರು ಗ್ರಾಮದ ಬುಡ್ಡಮ್ಮ ಶೆಟ್ಟಿ ಎಂಬವರ ಪಕ್ಕಾ ಮನೆಗೆ ಭಾಗಶ: ಹಾನಿಯಾಗಿದ್ದು, ಸುಮಾರು 40,000ರೂ. ನಷ್ಟ ಉಂಟಾಗಿದೆ ಎಂದೂ ವರದಿ ತಿಳಿಸಿದೆ.
Next Story





