3 ವರ್ಷದ ಮಗಳನ್ನು ಕೊಲೆಗೈದು ಹೊಲದಲ್ಲಿ ಹೂತಿಟ್ಟ ತಂದೆ
ಆರೋಪಿ ಬಂಧನ

ದಾವಣಗೆರೆ, ಅ.13: ವ್ಯಕ್ತಿಯೊರ್ವ ತನ್ನ ಮೂರು ವರ್ಷದ ಮಗಳನ್ನು ಕೊಲೆ ಮಾಡಿ ಹೊಲದಲ್ಲಿ ಹೂತಿಟ್ಟ ಘಟನೆ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಿರಿಶಾ(3) ಮೃತ ಮಗು. ಗುತ್ತಿದುರ್ಗ ನಿಂಗಪ್ಪ ಆರೋಪಿ ತಂದೆ.
ಗೊಲ್ಲರಹಳ್ಳಿಯ ನಿಂಗಪ್ಪ ಮೊದಲ ಹೆಂಡತಿಗೆ ಇಬ್ಬರು ಗಂಡು ಮಕ್ಕಳಿದ್ದು, ಗುತ್ತಿದುರ್ಗ ಗ್ರಾಮದ ಶಶಿಕಲಾಳನ್ನು ಎರಡನೇ ವಿವಾಹವಾಗಿದ್ದನು. ಅವರಿಗೆ ಒಂದು ಹೆಣ್ಣು ಮಗುವಿತ್ತು. ಆದರೆ ಎರಡು ತಿಂಗಳ ಹಿಂದೆ ಎರಡನೇ ಹೆಂಡತಿಯ ಹೆಣ್ಣು ಮಗು ಸಿರಿಶಾಳನ್ನು ತನ್ನ ಊರಿಗೆ ಕರೆದುಕೊಂಡು ಬಂದಿದ್ದು, ಸುಮಾರು 15 ದಿನಗಳ ಹಿಂದೆ ಕೊಲೆ ಮಾಡಿ ಹೂತಿಟ್ಟಿರುವುದಾಗಿ ಆರೋಪಿಯು ಪೊಲೀಸರಿಗೆ ತಿಳಿಸಿದ್ದಾನೆ.
ಶಶಿಕಲಾ ಮತ್ತು ನಿಂಗಪ್ಪ ಇಬ್ಬರು ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಬಳಿಕ ಶಶಿಕಲಾಳನ್ನು ವಿವಾಹವಾಗಿ ಚಿತ್ರದುರ್ಗದಲ್ಲಿ ವಾಸವಿದ್ದರು. ಎರಡನೇ ಹೆಂಡತಿ ಗರ್ಭಿಣಿಯಾದದ್ದು ತಿಳಿದ ಕೂಡಲೇ ನಿಂಗಪ್ಪ ಮಗು ತೆಗೆಸುವಂತೆ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಇದನ್ನು ಶಶಿಕಲಾ ವಿರೋಧಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ.
ಇತ್ತೀಚಿಗೆ ನಿಂಗಪ್ಪ ಚಿತ್ರದುರ್ಗಕ್ಕೆ ತೆರಳಿ ತನ್ನ ಮಗುವನ್ನು ಕರೆದುಕೊಂಡು ಗುತ್ತಿದುರ್ಗಕ್ಕೆ ಬಂದಿದ್ದಾನೆ. ಎರಡು ದಿನಗಳ ನಂತರ ತನ್ನ ಮಗುವನ್ನು ಕರೆದುಕೊಂಡು ಬರುವಂತೆ ಶಶಿಕಲಾ ಒತ್ತಾಯಿಸಿದ್ದಾಳೆ. ಆದರೆ ಬೈಕಿನಲ್ಲಿ ಹೋಗುವ ವೇಳೆ ಸಿರಿಶಾ ಗಾಳಿ ಹೊಡೆತಕ್ಕೆ ಶೀತ ಹೆಚ್ಚಾಗಿ ಮೃತಪಟ್ಟಿದ್ದಾಳೆ ಎಂದು ನಿಂಗಪ್ಪ ತಿಳಿಸಿದ್ದು, ಬಳಿಕ ಶಶಿಕಲಾ ತನ್ನ ಕುಟುಂಬದೊಂದಿಗೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಆರೋಪಿ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಜಮೀನಿನಲ್ಲಿ ಸಿರಿಶಾಳನ್ನು ಹೂತಿಟ್ಟದ ಜಾಗವನ್ನು ಪೊಲೀಸರು ಮಂಗಳವಾರ ಮಹಜರು ನಡೆಸಿದರು.







