ಉಡುಪಿ: ಬ್ಯಾಂಕ್ ಉದ್ಯೋಗಿ ಎಂಬುದಾಗಿ ನಂಬಿಸಿ ಮಹಿಳೆಯ ಚಿನ್ನಾಭರಣ ಕಳವು
ಉಡುಪಿ, ಅ.13: ಬ್ಯಾಂಕ್ ಉದ್ಯೋಗಿ ಎಂಬುದಾಗಿ ನಂಬಿಸಿ ಮಹಿಳೆಯೊಬ್ಬರ ಚಿನ್ನಾಭರಣ ಕಳವು ಮಾಡಿರುವ ಘಟನೆ ಅ.12ರಂದು ಉಡುಪಿಯ ಮಿತ್ರ ಆಸ್ಪತ್ರೆ ಬಳಿ ನಡೆದಿದೆ.
ಮುದರಂಗಡಿಯ ಹಲಸಿಕಟ್ಟೆಯ ನಿವಾಸಿ ಸರೋಜ(63) ಎಂಬವರು ಬೆನ್ನುನೋವಿನ ಚಿಕಿತ್ಸೆಗಾಗಿ ಉಡುಪಿಗೆ ಬಂದಿದ್ದು, ಆ ವೇಳೆ ಅಲ್ಲಿಗೆ ರಾಜೇಶ್ ಎಂದು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಕರ್ನಾಟಕ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಿಕೊಂಡಿದ್ದು ನಮ್ಮ ಬ್ಯಾಂಕಿನಲ್ಲಿ ಬಡವರಿಗೆ 17,000ರೂ. ಹಣ ಕೊಡುತ್ತಾರೆ, ನಾನು ನಿಮಗೆ ಅದನ್ನು ಕೊಡಿಸುವುದಾಗಿ ನಂಬಿಸಿದ್ದನು.
ಹಾಗೆ ಸರೋಜ ಅವರನ್ನು ಉಡುಪಿ ಮಿತ್ರ ಆಸ್ಪತ್ರೆಗೆ ಕರೆದುಕೊಂಡು ಹೋದ ಆತ, ತಮ್ಮ ಬಳಿ ಬಂಗಾರ ಇದ್ದರೆ ಬ್ಯಾಂಕ್‌ನವರು ಹಣ ಕೊಡುವುದಿಲ್ಲ ಎಂದು ಹೇಳಿ, ಅವರ ಬಳಿ ಇದ್ದ ಬಳೆಗಳನ್ನು ಅವರ ಬ್ಯಾಗ್‌ನಲ್ಲಿ ಇಡುತ್ತೇನೆಂದು ಹೇಳಿ ಹೋದ ವ್ಯಕ್ತಿ ವಾಪಾಸ್ಸು ಬಂದಿಲ್ಲ. ಆಗ ಸರೋಜ ಬ್ಯಾಗ್ ಪರಿಶೀಲಿಸಿದಾಗ ಬಳೆಗಳು ಕಳವಾಗಿರುವುದು ತಿಳಿದುಬಂತು. ಇವುಗಳ ಮೌಲ್ಯ 87,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





