ವಾಯುಭಾರ ಕುಸಿತ: ಆಂಧ್ರದಲ್ಲಿ ಭಾರೀ ಮಳೆ; ಮಗು ಸಹಿತ ಮೂವರು ಸಾವು

ವಿಶಾಖಪಟ್ಟಣಂ, ಅ.13: ಬಂಗಾಳಕೊಲ್ಲಿಯಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ವಾಯುಭಾರ ಕುಸಿತ ಮಂಗಳವಾರ ಬೆಳಿಗ್ಗೆ ಕಾಕಿನಾಡ ಕರಾವಳಿಯ ಮೂಲಕ ಆಂಧ್ರಪ್ರದೇಶವನ್ನು ದಾಟಿದೆ ಎಂದು ವಿಶಾಖಪಟ್ಟಣಂನ ಚಂಡಮಾರುತ ಎಚ್ಚರಿಕೆ ಕೇಂದ್ರ ಮಾಹಿತಿ ನೀಡಿದೆ.
ಪೂರ್ವ ಗೋದಾವರಿ ಜಿಲ್ಲೆಯ ತುನಿ ಮತ್ತು ವಿಶಾಖಪಟ್ಟಣಂನ ನರಸಿಪಟ್ಟಣಂ ಸಂಪರ್ಕ ರಸ್ತೆಯ ಮೇಲೆ ನದಿ ನೀರು ಉಕ್ಕಿಹರಿದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಕಾರಿನಲ್ಲಿದ್ದ ದಂಪತಿಯನ್ನು ರಕ್ಷಿಸಿದರೂ, ಜತೆಗಿದ್ದ ಹಿರಿಯ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟರು. ಸೋಮವಾರ ರಾತ್ರಿ ವಿಶಾಖಪಟ್ಟಣಂನಲ್ಲಿ ಕಲ್ಲು ಬಂಡೆಯೊಂದು ಮನೆಯ ಮೇಲೆ ಉರುಳಿಬಿದ್ದು 3 ವರ್ಷದ ಮಗು ಮತ್ತು ಮಗುವಿನ ತಾಯಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ವಿಶಾಖಪಟ್ಟಣಂ ಬಂದರಿನಲ್ಲಿ ಲಂಗರು ಹಾಕಲು ಸಜ್ಜಾಗಿದ್ದ ‘ಮಾ ಆಫ್ ಬಾಂಗ್ಲಾದೇಶ್’ ಎಂಬ ಹೆಸರಿನ ಹಡಗು ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ಉತ್ತರದತ್ತ ಚಲಿಸಿ ಬೀಚ್ ರಸ್ತೆಯ ತೆನ್ನೆಟಿ ಪಾರ್ಕ್‌ನ ಬಳಿ ದಡ ಸೇರಿದೆ. ಮಂಗಳವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಯನಾಮ್‌ನಲ್ಲಿ 25 ಸೆ.ಮೀ ಮಳೆಯಾಗಿದ್ದರೆ, ಅಮಲಾಪುರಂನಲ್ಲಿ 18 ಸೆ.ಮೀ, ತಡೆಪಲ್ಲೆಗುಡ್ಡಂ ಮತ್ತು ನುವಿಡ್‌ನಲ್ಲಿ ತಲಾ 18 ಸೆ.ಮೀ, ವಿಶಾಖಪಟ್ಟಣಂನಲ್ಲಿ 8 ಸೆ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.







