ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಿ: ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ
ಬೆಂಗಳೂರು. ಅ.13: ರಾಜ್ಯ ಸರಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಿಣಿ ವ್ಯವಸ್ಥೆ(ಒಪಿಎಸ್)ಯನ್ನೇ ಜಾರಿಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ರಾಜ್ಯ ಸರಕಾರ 2006ರ ನಂತರ ಸರಕಾರಿ ಹಾಗೂ ಅನುದಾನಿತ ನೌಕರರಿಗೆ ನಿಶ್ಚಿತ ಪಿಂಚಣಿ(ಒಪಿಎಸ್) ವ್ಯವಸ್ಥೆಯನ್ನು ರದ್ದು ಮಾಡಿ, ಎನ್‍ಪಿಎಸ್ ಜಾರಿಗೊಳಿಸಲಾಗಿದೆ. ಇದು ನೌಕರರ ನಡುವೆ ಅಸಮಾನತೆಗೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.
ಎನ್‍ಪಿಎಸ್ ಜಾರಿಯಾದ ನಂತರ ಅನುದಾನಿತ ನೌಕರರಿಗೆ ಯಾವುದೇ ಪಿಂಚಣಿ ವ್ಯವಸ್ಥೆ ಆಗಿಲ್ಲ. ಆದರೆ, ಎನ್‍ಪಿಎಸ್ ಪಡೆಯುತ್ತಿರುವ ಸರಕಾರಿ ನೌಕರರಿಗೂ ನಿಜವಾಗಿ ದೊರಕಬೇಕಾದ ಪ್ರಯೋಜನಗಳು ಸಿಗುತ್ತಿಲ್ಲ. ಹೀಗಾಗಿ ಎನ್‍ಪಿಎಸ್‍ನಿಂದ ಯಾವುದೇ ಪ್ರಯೋಜನವಿಲ್ಲವೆಂಬ ಭಾವನೆ ನೌಕರರ ಒಕ್ಕೊರಲ ಅಭಿಪ್ರಾಯವಾಗಿದೆ.
ರಾಜ್ಯ ಸರಕಾರ ಸರಕಾರಿ ನೌಕರರ ಆಶಯದಂತೆ ಎನ್‍ಪಿಎಸ್‍ನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ವ್ಯವಸ್ಥೆ ಜಾರಿಗೊಳಿಸಬೇಕು. ಆ ಮೂಲಕ ಸರಕಾರಿ ಮತ್ತು ಅನುದಾನಿತ ನೌಕರರಿಗೆ ನೆಮ್ಮದಿಯ ನಿವೃತ್ತಿಯ ಬದುಕನ್ನು ಕಲ್ಪಿಸಿಕೊಡಬೇಕೆಂದು ಅವರು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.







