ಹಬ್ಬಗಳ ಪ್ರಯುಕ್ತ ಅ.20ರಿಂದ 392 ವಿಶೇಷ ರೈಲುಗಳ ಸಂಚಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 14: ಅಕ್ಟೋಬರ್ ತಿಂಗಳಿಂದ ಸಾಲು ಸಾಲು ಹಬ್ಬಗಳು ಇರುವುದರಿಂದ ಭಾರತೀಯ ರೈಲ್ವೆ ಇಲಾಖೆ ಅ.20ರಿಂದ ನ.30ರವರೆಗೆ 392 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.
ಈ ವಾರ ಆರಂಭವಾಗುವ ದಸರಾದಿಂದ ಮುಂದಿನ ತಿಂಗಳ ದೀಪಾವಳಿವರೆಗೂ ಸಾಕಷ್ಟು ಹಬ್ಬಗಳು, ಸರಕಾರಿ ರಜೆಗಳು ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕೆಂದು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೊರೋನ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ತಡೆಯುವ ಉದ್ದೇಶದಿಂದ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಅ.20ರಿಂದ ನ.30ರವರೆಗೆ 196 ಜೋಡಿ ರೈಲುಗಳು ದೇಶದ ವಿವಿಧ ರಾಜ್ಯಗಳಿಗೆ ಸಂಚಾರ ಮಾಡಲಿವೆ. ಲಾಕ್ಡೌನ್ ಬಳಿಕ ರೈಲು ಸಂಚಾರವನ್ನು ಆರಂಭಿಸಲಾಗಿದ್ದು, ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ ವಿಶೇಷ ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚುವರಿ ರೈಲು ಸಂಚಾರ ಆರಂಭಿಸಲಾಗುತ್ತಿದೆ.
ಕೊಲ್ಕತ್ತಾ, ಪಾಟ್ನಾ, ವಾರಣಾಸಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ದುರ್ಗಾ ಪೂಜೆ, ದಸರಾ, ದೀಪಾವಳಿ, ಸೇರಿದಂತೆ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ನಡೆಸಲಿವೆ.
ನ.30ರ ನಂತರ ವಿಶೇಷ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ. ವಿಶೇಷ ರೈಲುಗಳು ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಸಂಚಾರ ನಡೆಸಲಿವೆ. ಪ್ರಾದೇಶಿಕ ರೈಲ್ವೆ ಇಲಾಖೆಗಳು ಆಯಾ ಭಾಗದ ರೈಲಿನ ವೇಳಾಪಟ್ಟಿಯನ್ನು ಪ್ರಕಟಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.







