ಬಿಹಾರದಲ್ಲಿ ಆರ್ ಜೆಡಿ ಸರಕಾರ ಬಂದರೆ ಕಾಶ್ಮೀರದ ಭಯೋತ್ಪಾದಕರು ರಾಜ್ಯದಲ್ಲಿ ನೆಲೆಸುತ್ತಾರೆ
ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಿತ್ಯಾನಂದ ರೈ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಚುನಾವಣಾ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಒಂದು ವೇಳೆ ಪ್ರತಿಪಕ್ಷ ರಾಷ್ಟ್ರೀಯ ಜನತಾ ದಳ( ಆರ್ ಜೆಡಿ) ದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿರುವ ಭಯೋತ್ಪಾದಕರು ಬಿಹಾರಕ್ಕೆ ಬಂದು ಆಶ್ರಯ ಪಡೆಯುತ್ತಾರೆ. ನಾವು ಹಾಗೆ ಆಗಲು ಬಿಡುವುದಿಲ್ಲ'' ಎಂದು ವೈಶಾಲಿಯಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ರೈ ಹೇಳಿದ್ದಾರೆ.
ರೈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಆರ್ ಜೆಡಿ ನಾಯಕ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಇದು ಚುನಾವಣೆಯ ಕಾರ್ಯಸೂಚಿಯ ದಿಕ್ಕು ತಪ್ಪಿಸುವ ಯತ್ನ ಎಂದಿದ್ದಾರೆ.
"ಬಿಹಾರದ ನಿರುದ್ಯೋಗದ ದರ ಶೇ.46.6. ನೀವು ನಿರುದ್ಯೋಗ, ಬಡತನ, ಹಸಿವು ಹಾಗೂ ವಲಸೆಯ ಭಯೋತ್ಪಾದಕತೆಯ ಬಗ್ಗೆ ಮಾತನಾಡಿ. ಕಳೆದ 15 ವರ್ಷಗಳಲ್ಲಿ ಡಬಲ್ ಎಂಜಿನ್ ಸರಕಾರ ಏನು ಮಾಡಿದೆ? ನಾವು ನಮ್ಮ ಕಾರ್ಯ ಸೂಚಿಯ ಪ್ರಕಾರವೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ'' ಎಂದರು
ಪ್ರತಿ ಬಿಹಾರಿಯು ನಿತ್ಯಾನಂದ್ ಅವರ ಹೇಳಿಕೆಯಿಂದ ನೋವನ್ನು ಹಾಗೂ ಅವಮಾನವನ್ನು ಅನುಭವಿಸುತ್ತಿದೆ. ಅವರ ಹೇಳಿಕೆ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಕುರಿತು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಆರ್ ಜೆಡಿಯ ರಾಜ್ಯಸಭಾ ಸದಸ್ಯ ಮನೋಜ್ ಕುಮಾರ್ ಝಾ ಹೇಳಿದ್ದಾರೆ.







