ಎನ್‌ಆರ್‌ಸಿ ಪಟ್ಟಿಯಿಂದ 10 ಸಾವಿರ ಅನರ್ಹರ ಹೆಸರು ಕೈಬಿಡಲು ಆದೇಶ

ಗುವಾಹಟಿ, ಅ.14: ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಿಂದ ‘ಅನರ್ಹ ವ್ಯಕ್ತಿಗಳ’ ಹೆಸರುಗಳನ್ನು ತೆಗೆದುಹಾಕುವಂತೆ ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿಯ ಸಮನ್ವಯಕಾರರು, ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯನ್ನು ಅಸ್ಸಾಂನಲ್ಲಿ ಕಳೆದ ವರ್ಷದ ಆಗಸ್ಟ್ 31ರಂದು ಪ್ರಕಟಿಸಲಾಗಿತ್ತು. ರಾಜ್ಯದ ಜನಸಂಖ್ಯೆಯ ಶೇ.6ರಷ್ಟು ಮಂದಿಯನ್ನು ಅಂದರೆ ಸುಮಾರು 19 ಲಕ್ಷ ಮಂದಿಯನ್ನು ಅದು ಪಟ್ಟಿಯಿಂದ ಕೈಬಿಟ್ಟಿತ್ತು.
ಎನ್‌ಆರ್‌ಸಿ ಪಟ್ಟಿಯಲ್ಲಿ ‘ಕೆಲವು ಅನರ್ಹ ವ್ಯಕ್ತಿಗಳ ಹೆಸರು ಸೇರ್ಪಡೆಯಾಗಿದೆ’ ಎಂದು ಎನ್‌ಆರ್‌ಸಿ ಸಮನ್ವಯಕಾರ ಹಿತೇಶ್ ದೇವ್ ಶರ್ಮಾ ಅವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಿದೇಶಿಯರ ನ್ಯಾಯಾಧೀಕರಣಗಳು ವಿದೇಶಿಯರೆಂದು ಘೋಷಿಸಲ್ಬಟ್ಟವರು, ಚುನಾವಣಾ ಅಧಿಕಾರಿಗಳಿಂದ ಅನುಮಾನಾಸ್ಪದ ಮತದಾರರೆಂದು ಗುರುತಿಸಲ್ಪಟ್ಟವರು ಅಥವಾ ವಿದೇಶಿಯರ ನ್ಯಾಯಾಧೀಕರಣಗಳಲ್ಲಿ ಇತ್ಯರ್ಥವಾಗದೆ ಉಳಿದಿರುವ ವ್ಯಕ್ತಿಗಳು ಹಾಗೂ ಅವರ ವಂಶಸ್ಥರು, ಎನ್‌ಆರ್‌ಸಿ ಪಟ್ಟಿಯಿಂದ ಅನರ್ಹರೆಂದು ಪರಿಗಣಿಸಲ್ಪಟ್ಟವರಲ್ಲಿ ಒಳಗೊಂಡಿದ್ದಾರೆ.
ಎನ್‌ಆರ್‌ಸಿಯಲ್ಲಿ ಒಳಗೊಳ್ಳಲು ಅನರ್ಹರೆಂದು ಗುರುತಿಸಲ್ಪಟ್ಟವರ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ತನಗೆ ಸಲ್ಲಿಸುವಂತೆ ಹಿತೇಶ್ ದೇವ್ ಶರ್ಮಾ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರತಿಯೊಂದು ಪ್ರಕರಣದಲ್ಲಿಯೂ ಎನ್‌ಆರ್‌ಸಿ ಪಟ್ಟಿಯಿಂದ ಆಯಾ ವ್ಯಕ್ತಿಯ ಹೆಸರನ್ನು ತೆಗೆದುಹಾಕಿರುವುದಕ್ಕೆ ಸಮರ್ಥನೀಯವಾದ ಕಾರಣವನ್ನು ನೀಡುವಂತೆಯೂ ಅವರು ಆದೇಶದಲ್ಲಿ ಸೂಚಿಸಿದ್ದಾರೆ.
ಸರಿಯಾದ ಎನ್‌ಆರ್‌ಸಿ ಪಟ್ಟಿಯನ್ನು ರಚಿಸಬೇಕಾದರೆ ಅದರಲ್ಲಿರುವ ಎಲ್ಲರ ಹೆಸರನ್ನು ಶೇ.10ರಿಂದ ಶೇ.20ರಷ್ಟು ಮರುದೃಢೀಕರಿಸಬೇಕೆಂದು ರಾಜ್ಯ ಸರಕಾರದ ನಿರಂತರ ಸೂಚನೆಯ ನಡುವೆ ಈ ಆದೇಶ ಹೊರಬಿದ್ದಿದೆ.
ಅಸ್ಸಾಂನ ಎನ್‌ಆರ್‌ಸಿ ಪಟ್ಟಿಯಲ್ಲಿ ಹಲವಾರು ಅನರ್ಹ ವ್ಯಕ್ತಿಗಳು ಹಾಗೂ ಅವರ ವಂಶಸ್ಥರ ಹೆಸರುಗಳು ಪಟ್ಟಿಯಲ್ಲಿ ಒಳಗೊಂಡಿದ್ದು, ಇದರಿಂದಾಗಿ ಸುಮಾರು 10 ಸಾವಿರ ಮಂದಿಯ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಈ ಆದೇಶದ ಬಗ್ಗೆ ಮಾಹಿತಿ ಹೊಂದಿರುವ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಇತ್ತೀಚೆಗೆ ನಡೆದ ಸಾರ್ವಜನಿಕ ರ್ಯಾಲಿಯೊಂದರಲ್ಲಿ, ಹಾಲಿ ಎನ್‌ಆರ್‌ಸಿ ಪಟ್ಟಿ ಲೋಪದೋಷದಿಂದ ಕೂಡಿದ್ದು, ಸರಕಾರಕ್ಕೆ ಸರಿಯಾದ ಎನ್‌ಆರ್‌ಸಿ ಬೇಕಾಗಿದೆ ಎಂದು ಹೇಳಿದ್ದರು.
ಈ ಮಧ್ಯೆ ಎನ್‌ಆರ್‌ಸಿ ಪಟ್ಟಿಯ ಮರುದೃಢೀಕರಣ ಕೋರಿ ರಾಜ್ಯ ಸರಕಾರವು ಸಲ್ಲಿಸಿರುವ ಅರ್ಜಿಯು ಈಗಲೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯುಳಿದಿದೆ.







