ಸಂತ್ರಸ್ತ ಕುಟುಂಬಕ್ಕೆ ಮೂರು ಸ್ತರಗಳ ಭದ್ರತೆ: ಸುಪ್ರೀಂನಲ್ಲಿ ಉ.ಪ್ರ.ಸರಕಾರದ ಹೇಳಿಕೆ
ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ

ಹೊಸದಿಲ್ಲಿ, ಅ.14: ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರವು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದು,ಸಂತ್ರಸ್ತ ಕುಟುಂಬಕ್ಕೆ ಮತ್ತು ಸಾಕ್ಷಿಗಳಿಗೆ ಮೂರು ಸ್ತರಗಳ ಭದ್ರತೆಯನ್ನು ಒದಗಿಸಿರುವುದಾಗಿ ತಿಳಿಸಿದೆ.
ನ್ಯಾಯಯುತ ಮತ್ತು ಮುಕ್ತ ತನಿಖೆ ನಡೆಯುವಂತಾಗಲು ಸಂತ್ರಸ್ತ ಕುಟುಂಬ ಮತ್ತು ಸಾಕ್ಷಿಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವುದಕ್ಕೆ ತಾನು ಬದ್ಧವಾಗಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿರುವ ಸರಕಾರವು, ತನಿಖೆಯ ಕುರಿತು ಪಾಕ್ಷಿಕ ಸ್ಥಿತಿಗತಿ ವರದಿಯನ್ನು ರಾಜ್ಯಸರಕಾರಕ್ಕೆ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶ ನೀಡುವಂತೆ ನ್ಯಾಯಾಲಯವನ್ನು ಕೋರಿಕೊಂಡಿದೆ. ಈ ವರದಿಯನ್ನು ಉತ್ತರ ಪ್ರದೇಶದ ಡಿಜಿಪಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ ಎಂದು ಅದು ತಿಳಿಸಿದೆ.
ಸಂತ್ರಸ್ತ ಕುಟುಂಬಕ್ಕೆ ಮೂರು ಸ್ತರಗಳ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೃತ ಯುವತಿಯ ಗ್ರಾಮದ ಪ್ರವೇಶದ್ವಾರದಲ್ಲಿ ಎಂಟು ಭದ್ರತಾ ಸಿಬ್ಬಂದಿಗಳು 24x7 ಕಾವಲು ನೀಡುತ್ತಿದ್ದು, ಮನೆಯ ಹೊರಗೆ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದೆ. ಮೂರು ಸ್ತರಗಳ ಭದ್ರತಾ ವ್ಯವಸ್ಥೆಯ ಮೊದಲ ಸ್ತರದಲ್ಲಿ ಸಬ್ ಇನ್‌ಸ್ಪೆಕ್ಟರ್ ದರ್ಜೆಯ ಪ್ಲಟೂನ್ ಕಮಾಂಡರ್,ಹೆಡ್ ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್‌ಗಳನ್ನೊಳಗೊಂಡ ಸಶಸ್ತ್ರ ಪೊಲೀಸ್ ಪಡೆಯಿದ್ದು, ಎರಡನೇ ಸ್ತರದಲ್ಲಿ ಸಿವಿಲ್ ಪೊಲೀಸರಿರುತ್ತಾರೆ. ಮೂರನೇ ಸ್ತರವು ಮನೆಯ ಸುತ್ತಲಿನ ಪ್ರದೇಶದಲ್ಲಿ ನಿಗಾಯಿಡಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ದೀಪಗಳ ಅಳವಡಿಕೆಯನ್ನು ಒಳಗೊಂಡಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.







