ಫ್ರೀಝರ್‌ನಲ್ಲಿ ಇರಿಸಿದ್ದ ವೃದ್ಧನ ರಕ್ಷಣೆ: ಸಾವನ್ನು ಎದುರು ನೋಡುತ್ತಿದ್ದ ಕುಟುಂಬದ ವಿರುದ್ಧ ಆಕ್ರೋಶ

ಸೇಲಂ (ತಮಿಳುನಾಡು), ಅ. 14: ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಫ್ರೀಜರ್‌ನಲ್ಲಿ ಇರಿಸಿದ್ದ 74 ವರ್ಷದ ವೃದ್ಧರೋರ್ವರನ್ನು ರಕ್ಷಿಸಿದ ಘಟನೆ ತಮಿಳನಾಡಿನ ಸೇಲಂ ಜಿಲ್ಲೆಯಲ್ಲಿ ಬುಧವಾರ ವರದಿಯಾಗಿದೆ. ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಸ್ಪತ್ರೆಯಿಂದ ಬಿಡುಗಡೆ ಮಾಡಲಾದ ವೃದ್ಧನ ಸಾವನ್ನು ಕುಟುಂಬ ಎದುರು ನೋಡುತ್ತಿತ್ತು ಹಾಗೂ ಕುಟುಂಬ ರಾತ್ರಿ ಶವ ಇರಿಸುವ ಪೆಟ್ಟಿಗೆಯಲ್ಲಿ ಅವರು ಮಲಗುವಂತೆ ಮಾಡಿತು ಎಂದು ಹೇಳಲಾಗುತ್ತಿದೆ.
ವೃದ್ಧನ ಸಹೋದರ ತೆಗೆದುಕೊಂಡು ಹೋದ ಫ್ರೀಝರ್ ಅನ್ನು ಹಿಂದೆ ಪಡೆಯಲು ಏಜೆನ್ಸಿಯ ನೌಕರ ಮಂಗಳವಾರ ಅವರ ಮನೆಗೆ ತೆರಳಿದಾಗ ಫ್ರೀಜರ್‌ನ ಒಳಗೆ ವೃದ್ಧ ಉಸಿರಾಡುತ್ತಿರುವುದನ್ನು ಕಂಡು ಇತರರ ಗಮನ ಸೆಳೆದಿದ್ದಾರೆ. ಅಲ್ಲದೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದಾರೆ. ಅನಂತರ ವೃದ್ಧನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಸುಬ್ರಹ್ಮಣೀಯನ್ ಕುಮಾರ್ ಎಂದು ಗುರುತಿಸಲಾದ ಈ ವೃದ್ಧ ಫ್ರೀಝರ್‌ನ ಒಳಗೆ ಉಸಿರೆಳೆಯಲು ಪರದಾಡುತ್ತಿರುವ ವೀಡಿಯೊ ದೃಶ್ಯ ಮನ ಕಲಕುವಂತಿದೆ. ಬಾಲಸುಬ್ರಹ್ಮಣೀಯನ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಚಿಂತಾಜನಕವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅವರ ಸಾವನ್ನು ಎದುರು ನೋಡುತ್ತಿದ್ದ ಸಹೋದರ ಫ್ರೀಜರ್‌ಗೆ ವಿನಂತಿಸಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ತಿಳಿಸಿದ್ದಾರೆ.
ಮೃತದೇಹವನ್ನು ಕೊಂಡೊಯ್ಯಲು ವಾಹನವನ್ನು ಉಚಿತವಾಗಿ ನೀಡಿದ ವಕೀಲ ದೇವಲಿಂಗಂ ಅವರು ವಿಷಯ ತಿಳಿದು ಕೂಡಲೇ ವೃದ್ಧನ ಮನೆಗೆ ಧಾವಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವೃದ್ಧನನ್ನು ರಾತ್ರೀ ಪೂರ್ತಿ ಫ್ರೀಜರ್‌ನ ಒಳಗೆ ಇರಿಸಲಾಗಿತ್ತು. ಏಜೆನ್ಸಿಯ ನೌಕರ ಇದನ್ನು ನೋಡಿ ಗಾಬರಿಗೊಂಡ ಹಾಗೂ ನನಗೆ ಮಾಹಿತಿ ನೀಡಿದ. ‘‘ದೇಹದಿಂದ ಆತ್ಮ ಹೊರಗೆ ಹೋಗಿಲ್ಲ. ನಾವು ಅದಕ್ಕಾಗಿ ಕಾಯುತ್ತಿದ್ದೇವೆ’’ ಎಂದು ಕುಟುಂಬದವರು ನನಗೆ ತಿಳಿಸಿದರು ಎಂದು ದೇವಲಿಂಗಂ ಹೇಳಿದ್ದಾರೆ.
ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ ಹಾಗೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.







