ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ: ಕಾಫಿ, ಅಡಿಕೆ, ತರಕಾರಿ ಬೆಳೆ ನಷ್ಟದ ಆತಂಕದಲ್ಲಿ ರೈತರು
ಚಿಕ್ಕಮಗಳೂರು, ಅ.14: ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಮಳೆಯಾರ್ಭಟ ಹೆಚ್ಚುತ್ತಿರುವಂತೆಯೇ ಕಾಫಿನಾಡಿನಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಬಯಲು ಭಾಗದಲ್ಲಿ ನಿರಂತರ ತುಂತುರು, ಜಡಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲಾದ್ಯಂತ ಮುಂದಿನ ಕೆಲ ದಿನಗಳವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಅದರಂತೆ ಕಳೆದ ಐದು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ನಂತರದ ದಿನಗಳಲ್ಲಿ ಜಿಲ್ಲಾದ್ಯಂತ ಸಾಧಾರಣ ಮಳೆ ಮುಂದುವರಿದಿದ್ದು, ಬುಧವಾರ ಜಿಲ್ಲೆಯಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಬಯಲು ಭಾಗದ ತಾಲೂಕುಗಳಲ್ಲೂ ಮಳೆಯಾರ್ಭಟ ಇತ್ತು.
ಬುಧವಾರ ಬೆಳಗ್ಗೆಯಿಂದಲೇ ಮಲೆನಾಡು ಭಾಗದ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಈ ಭಾಗದ ಹೇಮಾವತಿ, ಭದ್ರೆ, ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ, ಬಣಕಲ್, ಗೋಣಿಬೀಡು, ಕಳಸ, ಹೊರನಾಡು, ಕುದುರೆಮುಖ, ಸಂಸೆ ವ್ಯಾಪ್ತಿಯಲ್ಲಿ ಬುಧವಾರ ಅತೀ ಹೆಚ್ಚು ಮಳೆಯಾಗಿದ್ದು, ಹೇಮಾವತಿ ಹಾಗೂ ಭದ್ರಾ ನದಿಗಳು ತುಂಬಿಹರಿಯುತಿವೆ. ಮಳೆಯ ಆರ್ಭಟ ಮುಂದುವರಿದಲ್ಲಿ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ.
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲೂ ಬುಧವಾರ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಮಳೆಯಾರ್ಭಟ ಮುಂದುವರಿದಲ್ಲಿ ನದಿ ಪಾತ್ರದ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗುವ ಆತಂಕ ರೈತರನ್ನು ಕಾಡುತ್ತಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಇನ್ನು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ವೇಳೆ ಧಾರಾಕಾರ ಮಳೆಯಾಗಿದ್ದು, ಬುಧವಾರ ಮುಂಜಾನೆ ಕೊಂಚ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ಬಳಿಕ ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಜಡಿ ಮಳೆಯಾರ್ಭಟ ಇತ್ತು. ಮಧ್ಯಾಹ್ನ ಆರಂಭವಾಗಿದ್ದ ಮಳೆ ಸಂಜೆವರೆಗೂ ಬಿಟ್ಟುಬಿಟ್ಟು ಸುರಿಯಿತು. ಕಡೂರು ಹಾಗೂ ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಬುಧವಾರ ಜಡಿ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಂದೆರೆಡು ಮನೆಗಳಿಗೆ ಭಾಗಶಃ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಉಳಿದಂತೆ ಅಲ್ಲಲ್ಲಿ ಮರಗಳು ರಸ್ತೆಗುರುಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದ ಬಗ್ಗೆ ವರದಿಯಾಗಿವೆ. ಉಳಿದಂತೆ ಭಾರೀ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿರುವುದರಿಂದ ಕಾಫಿ, ಅಡಿಕೆ ಸೇರಿದಂತೆ ತರಕಾರಿ ಬೆಳೆಗಳಿಗೆ ಕೊಳೆ ರೋಗ ಹರಡುವ ಭೀತಿ ಎದುರಾಗಿದೆ. ಸದ್ಯ ಕಾಫಿ ತೋಟಗಳಲ್ಲಿ ಕಾಫಿ ಬೆಳೆ ಕಾಯಿ ಕಟ್ಟಿದ್ದು, ಸತತ ಮಳೆಯಾದಲ್ಲಿ ಬೆಳೆಗೆ ಕೊಳೆ ರೋಗ ತಗುಲಿ ಕಾಫಿ ಬೀಜಗಳು ಉದುರುವ ಭೀತಿಯಲ್ಲಿ ಬೆಳೆಗಾರರಿದ್ದಾರೆ. ಮಲೆನಾಡು ಭಾಗದ ಅಡಿಕೆ ತೋಟಗಳ ಕೃಷಿಕರೂ ಕೊಳೆ ರೋಗದ ಆತಂಕದಲ್ಲಿದ್ದಾರೆ. ಇನ್ನು ಜಿಲ್ಲೆಯ ಬಯಲು ಭಾಗದಲ್ಲೂ ಮಳೆಯಾಗುತ್ತಿರುವುದರಿಂದ ತರಕಾರಿ ಬೆಳೆಗಳೂ ನಷ್ಟವಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಹೇಮಾವತಿ, ಭದ್ರಾ, ತುಂಗಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿರುವ ಭದ್ರಾ ಜಲಾಯಶದಲ್ಲಿ ನೀರಿನ ಒಳಹರಿವು ಹೆಚ್ಚುತ್ತಿದೆ. ಭದ್ರಾ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಬುಧವಾರ ಜಲಾಶಯದ ಕ್ರೆಸ್ಟ್ ಗೇಟ್ ಮೂಲಕ 3300 ಕೂಸೆಕ್ ಹಾಗೂ ರಿವರ್ಬೆಡ್ ಮೂಲಕ 1000 ಕ್ಯೂಸೆಕ್ ನೀರು ಸೇರಿದಂತೆ ಒಟ್ಟಾರೆ 4300 ನೀರನ್ನು ಹೊರ ಬಿಡಲಾಗುತ್ತಿದೆ. ಹೊರ ಬಿಡಲಾಗುತ್ತಿದೆ.







