‘ಮಾನಸಿಕ ಅಸ್ವಸ್ಥ’ ಹೇಳಿಕೆಗೆ ಕ್ಷಮೆ ಯಾಚಿಸಿದ ಖುಷ್ಬೂ

ಚೆನ್ನೈ, ಅ. 14: ಮಾನಸಿಕ ಅಸ್ವಸ್ಥ’ ಪರಿಭಾಷೆ ಬಳಸಿರುವುದಕ್ಕಾಗಿ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಬುಧವಾರ ಕ್ಷಮೆ ಯಾಚಿಸಿದ್ದಾರೆ. ಖುಷ್ಬೂ ಬಿಜೆಪಿ ಸೇರಿದ ಒಂದು ದಿನದ ಬಳಿಕ ಬುಧವಾರ, ಕಾಂಗ್ರೆಸ್ ‘ಮಾನಸಿಕ ಅಸ್ವಸ್ಥ’ರ ಪಕ್ಷ ಎಂದು ಹೇಳಿಕೆ ನೀಡಿದ್ದರು. ಆದರೆ, ಕಾಂಗ್ರೆಸ್ ಟೀಕಿಸುವ ಭರದಲ್ಲಿ ಮನೋರೋಗಿಗಳನ್ನು ನಿಂದಿಸುವ ಈ ಹೇಳಿಕೆಯನ್ನು ಮಾನಸಿಕ ಆರೋಗ್ಯ ಕಾರ್ಯಕರ್ತರು ಟೀಕಿಸಿದ್ದರು.
‘ಕ್ಷಮೆ ಇರಲಿ’ ಎಂದು ವ್ಯಾಟ್ಸ್ ಆ್ಯಪ್ ಸಂದೇಶದಲ್ಲಿ ಹೇಳಿರುವ ಖುಷ್ಬ್ಬೂ, ‘‘ನನಗೆ ಮೆದುಳಿಲ್ಲ ಹಾಗೂ ನಾನು ಸುಲಭವಾಗಿ ನನ್ನ ಗಂಡನಿಂದ ಬ್ರೈನ್‌ವಾಶ್‌ಗೆ ಒಳಗಾಗುತ್ತೇನೆ ಎಂದು ಕಾಂಗ್ರೆಸ್ ನೀಡಿರುವ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದೆ’’ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಖುಷ್ಬೂ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ಅವರು ಈ ಪರಿಭಾಷೆ ಬಳಸಿದ್ದರು.
Next Story





