ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯುತ್ತಿರುವ ತಾಳಿಪಾಡಿ ನೇಕಾರರ ಸಂಘದ ಉಡುಪಿ ಸೀರೆ : ಸಂಘಟಕರು
ಮುಲ್ಕಿ: ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಂಘದ ಉಡುಪಿ ಸೀರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿದ್ದು ಬಹಳಷ್ಟು ಗ್ರಾಹಕರು ಕೊಂಡುಕೊಳ್ಳಲು ಆಸಕ್ತಿ ವಹಿಸುತ್ತಿದ್ದಾರೆ. ಕದಿಕೆ ಟ್ರಸ್ಟ್, ಕಾರ್ಕಳ ರವರು ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಕಿನ್ನಿಗೋಳಿ ಜೊತೆ ಜಂಟಿಯಾಗಿ ಉಡುಪಿ ಸೀರೆಯ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಯಶಸ್ಸು ಸಾಧಿಸಲು ಕಾರಣವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ನೇಕಾರರಿಗೆ ವೈದ್ಯಕೀಯ ಸಹಾಯ, ಮಗ್ಗದ ಶೆಡ್ ಕಟ್ಟಲು ಸಹಾಯ, ಮೂರು ತಿಂಗಳಿಗೊಮ್ಮೆ ಉತ್ತಮ ನೇಕಾರರನ್ನು ಗುರುತಿಸಿ ಗೌರವಿಸುವ ಕಾರ್ಯ ಹಾಗೂ ಪರಿಸರ ಸ್ನೇಹಿ ಬಣ್ಣದ ತರಬೇತಿ ಕೊಡುವ ಮೂಲಕ ಸಹಜ ಬಣ್ಣದ ಸೀರೆ ಉತ್ಪಾದಿಸಿ ನೇಕಾರರಿಗೆ ಹೆಚ್ಚಿನ ಆದಾಯ ಸಿಗುವಂತೆ ಕದಿಕೆ ಟ್ರಸ್ಟ್ ನವರು ಮಾಡಿದ್ದು ಹಲವು ದಾನಿಗಳ ಮೂಲಕ 10 ಮಗ್ಗ ಖರೀದಿಗೆ, ಜಿಐ ಟ್ಯಾಗ್ ಬಳಸಲು ಅನುಮತಿ ದೊರಕಿಸಲು ಕದಿಕೆ ಟ್ರಸ್ಟ್ ನವರು ಸಹಾಯ ಮಾಡಿದ್ದಾರೆ.
ಮುಂದಿನ ದಿನದಲ್ಲಿ 5 ಜನಕ್ಕೆ ನೇಯ್ಗೆ ತರಬೇತಿ, ಎಂಬ್ರಾಯಿಡರ್ ತರಬೇತಿ, ಓಝೋಪ್ರೀ ಬಣ್ಣದ ತರಬೇತಿ ಕೊಟ್ಟು ನಮ್ಮಲ್ಲಿ ಅದನ್ನು ಬಳಸುವಂತೆ ಮಾಡುವುದು, ಸಹಜ ಬಣ್ಣದ ಯೂನಿಟ್ ಪ್ರಾರಂಭಿಸುವುದು, ನೇಕಾರರ ಕ್ಷೇಮಾಭಿವೃದ್ಧಿ ಸ್ಥಾಪಿಸುವ ಮೂಲಕ ನೇಕಾರರ ತುರ್ತು ಅಗತ್ಯಗಳಿಗೆ ಸಹಾಯ ಮಾಡುವುದು, ಸಂಘದಲ್ಲಿ ನೇಯ್ಗೆ ಮಾಡುವವರಿಗೆ ಮಳೆಗಾಲದಲ್ಲಿ ಬೆಳಕಿನ ತೊಂದರೆ ಆಗುತ್ತಿರುವುದರಿಂದ ಸೆಲ್ಕೋ ಸೋಲಾರ್ ಕಂಪೆನಿ ಮೂಲಕ ಬೆಳಕಿನ ವ್ಯವಸ್ಥೆ ಮಾಡಿಕೊಡುವುದು ಮುಂತಾದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿ ಐ ಉಲ್ಲೇಖಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಹೊಸ ವಿನ್ಯಾಸ ಮಾಡಲು ಕದಿಕೆ ಟ್ರಸ್ಟ್ ಸಹಾಯ ಮಾಡಿದೆ. ವಿನ್ಯಾಸಕರಾದ ಸಚ್ಚಿದಾನಂದ ಮೈಸೂರು ಅವರ ನೆರವಿನಿಂದ ಸೀರೆಗೆ ಲೋಗೋ ಮತ್ತು ನೇಕಾರರ ಹೆಸರು ಮತ್ತು ಫೋಟೋ ಇರುವ ಬ್ಯಾಂಡ್ ಮಾಡಿಸಿ ಕೊಟ್ಟಿರುವುದರಿಂದ ಗ್ರಾಹಕರಿಗೆ ನೇಕಾರರ ಬಗ್ಗೆ ಅರಿಯಲು ಸಹಾಯವಾಗಿದೆ. ಕೖೆಮಗ್ಗ ಮತ್ತು ಜವಳಿ ಇಲಾಖೆಯವರ ವಿವಿಧ ಯೋಜನೆಗಳ ಮೂಲಕ ಕೈಮಗ್ಗ ನೇಕಾರರಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಕದಿಕೆ ಟ್ರಸ್ಟ್ ನ ಈ ಎಲ್ಲಾ ಕೆಲಸಗಳಿಂದ ಸ್ಥಳೀಯರು ಉಡುಪಿ ಕೈಮಗ್ಗ ಸೀರೆ ತೆಗೆದುಕೊಳ್ಳಲು ಮತ್ತು ನೇಕಾರಿಕೆಯಲ್ಲಿ ತೊಡಗಿಸಿ ಕೊಳ್ಳಲು ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ ಎಂದು ತಾಳಿಪಾಡಿ ನೇಕಾರರ ಸಂಘದ ಮೂಲಗಳು ತಿಳಿಸಿವೆ.







