ಕಾಂಗ್ರೆಸ್ ನಾಯಕನ ಮೇಲೆ ಹಲ್ಲೆ : ಆರೋಪಿಗಳನ್ನು ಬಂಧಿಸಿ ಕ್ರಮಕ್ಕೆ ಮೊಯ್ದೀನ್ ಬಾವ ಒತ್ತಾಯ

ಮಂಗಳೂರು, ಅ.15: ಗ್ರಾಮ ಪಂಚಾಯತ್ ಚುನಾವಣೆಯ ಘೋಷಣೆಯ ಬೆನ್ನಲ್ಲೇ ಕೋಮು ಭಾವನೆ ಕೆರಳಿಸುವ ನಿಟ್ಟಿನಲ್ಲಿ ಕುಲಶೇಖರ ಬಳಿ ಸೋಮವಾರದಂದು ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಹಲ್ಲೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ ಅವರು, ಕಾಂಗ್ರೆಸ್ ಮುಖಂಡ ಯೂಸುಫ್‌ರವರು ತಮ್ಮ ಕಾರಿನಲ್ಲಿ ಕುಲಶೇಖರದಿಂದ ಉಳಾಯಿಬೆಟ್ಟು ಬಳಿ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬೈಕ್ ತಾಗಿಸಿದ್ದ. ಬಳಿಕ ಆ ವ್ಯಕ್ತಿಯಲ್ಲಿ ಮಾತನಾಡಿ ಮುಂದೆ ಹೋಗುವ ವೇಳೆ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಯೂಸುಫ್‌ರವರು ನಾಯಕರಿಗೆ ಈ ವಿಷಯ ತಿಳಿಸುತ್ತಾರೆ. ಬಳಿಕ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಬಿಜೆಪಿಗೆ ಸದ್ಯ ಚುನಾವಣೆಗೆ ಸಾಧನೆ ಹೇಳಿಕೊಳ್ಳಲು ಸಾಧ್ಯವಾಗದ ಕಾರಣ ಈ ರೀತಿ ಕೋಮು ಭಾವನೆ ಕೆರಳಿಸುವ ಉದ್ದೇಶದಿಂದ ಈ ಕೃತ್ಯ ನಡೆಸಿದೆ. ಪಕ್ಷದ ನಾಯಕರನ್ನು ಬೆದರಿಸುವ ಕೆಲಸವನ್ನು ಬಿಜೆಪಿಯ ಗೂಂಡಾಗಳು ಮಾಡುತ್ತಿದ್ದಾರೆ ಎಂದು ಮೊಯ್ದೀನ್ ಬಾವಾ ಆರೋಪಿಸಿದರು.





