ಮಿಥುನ್ ರೈ ಬಿಜೆಪಿಯಿಂದ ಹಿಂದುತ್ವದ ಪಾಠ ಕಲಿಯಬೇಕಾಗಿಲ್ಲ: ಹರೀಶ್ ಕುಮಾರ್

ಮಂಗಳೂರು, ಅ.15: ಹನುಮಾನ್ ಚಾಲೀಸಾ ಪಠಣ, ದೇವಸ್ಥಾನಕ್ಕೆ ಕಪಿಲೆ ಹಸುಗಳ ದಾನ, ತುಳು ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಪಿಲಿನಲಿಕೆ ಕಾರ್ಯಕ್ರಮಗಳನ್ನು ಮಾಡುವಂತಹ ಕಾಂಗ್ರೆಸ್‌ನ ಯುವ ನಾಯಕ ಮಿಥುನ್ ರೈಯವರು ಬಿಜೆಪಿಯಿಂದ ಹಿಂದುತ್ವದ ಪಾಠ ಕಲಿಯಬೇಕಾಗಿಲ್ಲ. ಬದಲಾಗಿ ಅವರಿಂದ ಬಿಜೆಪಿ ಹಿಂದುತ್ವದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಕಲಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಕೆ ಸಹಿಸಲು ಸಾಧ್ಯವಾಗದವರು ರಾಜಕೀಯಲ್ಲಿ ಇರಬಾರದು ಎಂದು ಹೇಳಿದರು.
ಕಾವಿಧಾರಿಗಳ ಬಗ್ಗೆ ನಮಗೂ ಗೌರವ ಇದೆ. ನಾವೂ ಶಂಕರಾಚಾರ್ಯರ ಭಕ್ತರು. ಆದರೆ ರಾಜಕೀಯಕ್ಕೆ ಬಂದ ಬಳಿಕ ಕಾವಿ, ಜಾತಿಯನ್ನು ಬಳಸಬಾರದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿಯಾಗಿ ಟೀಕಿಸುತ್ತಿರುವುದು. ಆದರೆ ಬಿಜೆಪಿಯವರು ಜಾತಿ, ಧರ್ಮವನ್ನು ಎತ್ತಿ ಕಟ್ಟುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದವರು ಹೇಳಿದರು.
ಆದಿತ್ಯನಾಥ್‌ರವರ ಮೇಲೆ ಹಿಂದೆಯೇ 52 ಕ್ರಿಮಿನಲ್ ಪ್ರಕರಣಗಳಿದ್ದವು. ಆದರೆ ಅವರು ಮುಖ್ಯಮಂತ್ರಿ ಆದ ಮೇಲೆ ಅವೆಲ್ಲಾ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಮಾಡಲಾಗಿದೆ. ಮುಖ್ಯಮಂತ್ರಿಯಾದ ಬಳಿಕ ಕಾವಿಯ ವ್ಯಾಮೋಹ ಬಿಡಬೇಕು. ಅದು ಬಿಡುವುದಿಲ್ಲ ಎಂದಾದರೆ ಮುಖ್ಯಮಂತ್ರಿಯಾಗಿದ್ದುಕೊಂಡು ಟೀಕೆಯನ್ನು ಎದುರಿಸಬೇಕು. ದಲಿತ ಪರ ಹೋರಾಟಗಾರರಾಗಿದ್ದ ಸ್ವಾಮಿ ಅಗ್ನಿವೇಶ್ ಮೇಲೆ ಅವರ ಕಾವಿ ಹರಿದು ಹಲ್ಲೆ ನಡೆಸಿದ ಬಿಜೆಪಿಯ ಕಾವಿ ಪ್ರೇಮ ಅದರಿಂದಲೇ ವ್ಯಕ್ತವಾಗಿದೆ. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಪ್ರಧಾನಿಯಿಂದ ಹಿಡಿದು ಇತರ ಯಾವುದೇ ನಾಯಕರು ಮಾತನಾಡುವುದಿಲ್ಲ. ನಮ್ಮದೇ ಪುತ್ತೂರಿನಲ್ಲಿ ಹಿಂದೂ ಗಳಿಂದಲೇ ಹಿಂದೂ ಯುವಕನ ಕೊಲೆ ಆದಾಗ ಸ್ಥಳೀಯ ಬಿಜೆಪಿ ನಾಯಕರು ಚಕಾರವೂ ಎತ್ತಿಲ್ಲ. ಆದರೆ ದಲಿತರ ಜೀವಕ್ಕೆ ಬೆಲೆ ಇಲ್ಲದೆ, ಸಾಕ್ಷಿ ಇಲ್ಲದಂತೆ ಮಾಡಲಾಗುತ್ತದೆ. ಇದನ್ನು ಕಾಂಗ್ರೆಸ್ ಪ್ರಬಲವಾಗಿ ಖಂಡಿಸುತ್ತದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದೀನ್ ಬಾವಾ, ನಾಯಕರಾದ ಶಶಿಧರ ಹೆಗ್ಡೆ, ಸುಧೀರ್ ಹೆಗ್ಡೆ, ನೀರಜ್ ಪಾಲ್, ರಕ್ಷಿತ್, ಸಲೀಂ, ಹರಿನಾಥ್, ಸುರೇಂದ್ರ ಕಾಂಬ್ಳಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾಗಮ ಶಿಕ್ಷಕರಿಗೆಲ್ಲ ರಕ್ಷಣೆ ಸಿಗಲಿ: ಅಭಯಚಂದ್ರ ಜೈನ್
ವಿದ್ಯಾಗಮ ಯೋಜನೆಯಡಿ ಸೇವೆ ಸಲ್ಲಿಸುತ್ತಿದ್ದ ಮೂಡಬಿದ್ರೆ ಪ್ರೌಢಶಾಲೆಯ ಶಿಕ್ಷಕಿ ಕೊರೋನದಿಂದ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಕೆಯ ಪುತ್ರಿಯ ಹಾಗೂ ಮಾಧ್ಯಮಗಳ ಮನವಿಯ ಮೇರೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ರನ್ನು ಅಭಿನಂದಿಸುವುದಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿ ಸಂಕಷ್ಟದಲ್ಲಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದು ಕೊಂಡಿದ್ದಾರೆ. ಅವರ ರಕ್ಷಣೆಗೆ ಸರಕಾರ ಧಾವಿಸಬೇಕು. ಕೊರೋನದಿಂದಾಗಿ ಬಡವರು ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲಾಗದೆ ತೊಳಲಾಗುತ್ತಿದ್ದಾರೆ. ಅವರಿಗೆ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯಿಸಿದರು.







