ದ.ಕ ಜಿಲ್ಲೆಯಲ್ಲಿ ಮಳೆ ಹಾನಿ: 25 ಕೋಟಿ ರೂ. ಬಿಡುಗಡೆ- ಸಚಿವ ಕೋಟ

ಬೆಂಗಳೂರು, ಅ. 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಹಾನಿಗೆ ಒಳಗಾಗಿರುವ ಕುಟುಂಬಗಳಿಗೆ ಅಗತ್ಯ ಪರಿಹಾರ ನೀಡುವುದು ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಕೂಡಲೇ ಕ್ರಮ ವಹಿಸಲು ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿತು.
ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವನ್ನು ಭೇಟಿ ಮಾಡಿದ ನಿಯೋಗ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕು. ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಬೇಕು. ಮೂರು ಜಿಲ್ಲೆಗಳ ನದಿಗಳಲ್ಲಿ ಮುಳುಗಿ ಮರಳು ತೆಗೆಯುವ ಕ್ರಮ ಬಹಳ ಹಿಂದಿನಿಂದಲೂ ಇದ್ದು ಅದನ್ನು ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯುತ್ತಿದ್ದು, ಇತರ ಜಿಲ್ಲೆಗಳ ಮರಳು ನೀತಿಯ ನಿಯಮಗಳು ಇಲ್ಲಿಗೆ ಅನ್ವಯಿಸುವುದಿಲ್ಲ. ಆದುದರಿಂದ ಈ ಜಿಲ್ಲೆಗಳಲ್ಲಿನ ನದಿಯಲ್ಲಿ ಮರಳು ಗಣಿಗಾರಿಕೆಗೆ ಹೇರಿರುವ ನಿರ್ಬಂಧ ತೆರವು ಮಾಡಬೇಕು. ಕರಾವಳಿ ಜಿಲ್ಲೆಗಳಿಗೆ ಮಾತ್ರ ಅನ್ವಯ ಆಗುವಂತೆ ಮರಳು ನೀತಿ ಜಾರಿಗೆ ತರಬೇಕು ಎಂದು ನಿಯೋಗ, ಸಿಎಂಗೆ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನಕ್ಕೆ ಸಾಕಷ್ಟು ತೊಂದರೆ ಉಂಟಾಗಿದೆ. ಆದುದರಿಂದ ಮಳೆಹಾನಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ತತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು. ಆ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಧಾವಿಸಬೇಕು ಎಂದು ನಿಯೋಗ, ಸಿಎಂ ಬಿಎಸ್‍ವೈ ಅವರನ್ನು ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗದಲ್ಲಿ ಶಾಸಕರಾದ ಸಂಜೀವ ಮಠಂದೂರು, ಡಾ.ಭರತ್ ಶೆಟ್ಟಿ, ಎಸ್.ಎಂ.ಅಂಗಾರ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಪ್ರತಾಪ್ ಸಿಂಹ ನಾಯಕ್ ಹಾಗೂ ರಾಜೇಶ್ ನಾಯಕ್ ಉಪಸ್ಥಿತರಿದ್ದರು.
25 ಕೋಟಿ ರೂ.ಬಿಡುಗಡೆ: ಸಚಿವ ಪೂಜಾರಿ
''ದಕ್ಷಿಣ ಕನ್ನಡ ಜಿಲ್ಲೆ ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೆರವು ನೀಡಲು ಜಿಲ್ಲೆಯ ಶಾಸಕರ ನಿಯೋಗ ಸಿಎಂಗೆ ಮನವಿ ಸಲ್ಲಿಸಿದ್ದು, 25 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಲು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ'' ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಶಾಸಕರ ನಿಯೋಗ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿದ್ದು, ಜಿಲ್ಲೆಯಲ್ಲಿನ ಕುಮ್ಕಿ, ಬಾಣೆ, ಸೊಪ್ಪಿನಬೆಟ್ಟ, ಮೂಲಗೇಣಿ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೋರಿದ್ದು, ಒಂದು ವಾರದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಪರಿಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ, `ವಾರ್ತಾಭಾರತಿ' ಪತ್ರಿಕೆಗೆ ದೂರವಾಣಿಯಲ್ಲಿ ತಿಳಿಸಿದರು.







