ಕೇಂದ್ರ ಜಾರಿಗೊಳಿಸಿರುವ 3 ಮಸೂದೆ ರೈತರಿಗೆ ಮರಣ ಶಾಸನ : ಬಿ.ಕೆ.ಹರಿಪ್ರಸಾದ್

ಉಡುಪಿ, ಅ.15: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳು ದೇಶದ ರೈತರಿಗೆ ಮರಣ ಶಾಸನವಾಗಿ ಪರಿಣಮಿಸಲಿವೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ, ಎಐಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಭವಿಷ್ಯ ನುಡಿದಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗುರುವಾರ ಆಯೋಜಿಸಲಾದ ‘ಗ್ರಾಮೀಣ ಜನ ಸಂಪರ್ಕ ಅಭಿಯಾನ’ ಹಾಗೂ ರೈತ ವಿರೋಧಿ ಮಸೂದೆಗಳ ವಾಪಸಾತಿಗಾಗಿ ಆಗ್ರಹಿಸಿ ಹಮ್ಮಿಕೊಂಡ ‘ಸಹಿ ಸಂಗ್ರಹ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಐದು ಕೋಟಿ ರೈತರ ಪರವಾಗಿ 30 ಕೋಟಿ ಸಹಿ ಸಂಗ್ರಹಿಸಿ ರಾಷ್ಟ್ರಪತಿ ಅವರಿಗೆ ಸಲ್ಲಿಸಲಾುವುದು ಎಂದು ಅವರು ತಿಳಿಸಿದರು.
ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರಗಳ ಮಸೂದೆ, ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, ಅವಶ್ಯ ವಸ್ತುಗಳ (ತಿದ್ದುಪಡಿ) ಮಸೂದೆಯನ್ನು ಯಾವುದೇ ಚರ್ಚೆ ಮಾಡದೇ ಜಾರಿಗೆ ತರಲಾಗಿದೆ. ಇದರಿಂದಾಗಿ ದೇಶದ ರೈತ ಸಮುದಾಯ ಭವಿಷ್ಯದಲ್ಲಿ ತೀವ್ರ ಸಂಕಟ ಅನುಭವಿಸಬೇಕಾಗುತ್ತದೆ ಎಂದವರು ನುಡಿದರು.
ಇಂದಿರಾ ಗಾಂಧಿ ಅವರ ಭೂಮಸೂದೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅನೇಕರಿಗೆ ಭೂಮಿ ಸಿಕ್ಕಿದೆ. ಇದರಲ್ಲಿ ಭೂಮಿ ಕಳೆದುಕೊಂಡ ಮಾಲಕರು ಇನ್ನೂ ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಆದರೆ ಭೂಮಿ ಹಕ್ಕು ಪಡೆದು ಕೊಂಡವರ ಪೈಕಿ ಶೇ.50ರಷ್ಟು ಜನರಿಗೆ ಇಂದು ತಮಗೆ ಭೂಮಿ ಯಾರ ಕಾಲದಲ್ಲಿ ಸಿಕ್ಕಿದೆ ಎನ್ನುವುದೇ ಗೊತ್ತಿಲ್ಲ. ಹೀಗಾಗಿ ಪಕ್ಷದ ಕಾರ್ಯ ಕರ್ತರು ಈ ಹಿಂದೆ ಪಕ್ಷ ಮಾಡಿರುವ ಮಹತ್ತರವಾದ ಜನೋಪಯೋಗಿ ಕಾರ್ಯಗಳು, ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದವರು ಸಲಹೆ ನೀಡಿದರು.
ಹೊಲಿಗೆ ಘಟಕ ಮುಚ್ಚಿಸಿದ ಶಾಸಕರು
ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ವಂಡ್ಸೆ ಗ್ರಾಪಂನಲ್ಲಿ ಸರಕಾರದ ಅನುದಾನದಡಿಯಲ್ಲಿ ನಿರ್ಮಿಸಲಾದ ಮಹಿಳಾ ಸ್ತ್ರೀ ಶಕ್ತಿ ವ್ಯವಸಾಯ ಸಂಘದಿಂದ ಮಹಿಳಾ ಸ್ವಾವಲಂಬನೆಗಾಗಿ ಪ್ರಾರಂಭಿಸಲಾದ ಹೊಲಿಗೆ ಘಟಕವನ್ನು ಈಗಿನ ಶಾಸಕರು ಅಲ್ಲಿಂದ ಎತ್ತಂಗಡಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಅ.16ರಂದು ಸ್ವಾವಲಂ ಬನೆ ಹೊಲಿಗೆ ಘಟಕ ಎತ್ತಂಗಡಿ ವಿರೋಧಿಸಿ ಕಾಂಗ್ರೆಸ್ ಪಕ್ಷ, ವಿವಿಧ ಸಂಘಟನೆಗಳ ಜೊತೆಗೂಡಿ ವಂಡ್ಸೆ ಗ್ರಾಪಂ ಎದುರು ಪ್ರತಿಭಟನೆ ನಡೆಸಲಿವೆ ಎಂದರು.
ಸಭೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ರಾದ ವೆರೋನಿಕಾ ಕರ್ನೆಲಿಯೋ, ಎಂ.ಎ. ಗಫೂರ್, ಪಿ.ವಿ. ಮೋಹನ್, ದಿನೇಶ್ ಪುತ್ರನ್, ಗೀತಾ ವಾಗ್ಲೆ, ನವೀನಚಂದ್ರ ಶೆಟ್ಟಿ ಕಾಪು, ಡಾ.ಸುನೀತಾ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಶಿರಿಬೀಡು, ಬಿ. ನರಸಿಂಹ ಮೂರ್ತಿ, ಹಿರಿಯಣ್ಣ, ನಿತ್ಯಾನಂದ ಶೆಟ್ಟಿ, ಮೈರ್ಮಾಡಿ ಸುಧಾಕರ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೆರಾ, ವಿಶ್ವಾಸ್ ಅಮೀನ್, ರಾಜು ಪೂಜಾರಿ, ಹರೀಶ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಶಾಂತ ಜತ್ತನ್, ಸುಕು ಮಾರ್, ಶಶಿಧರ್ ಶೆಟ್ಟಿ ಎಲ್ಲೂರು, ಉದ್ಯಾವರ ನಾಗೇಶ್ ಕುಮಾರ್, ಮಹಾಬಲ ಕುಂದರ್, ಕೇಶವ ಕೋಟ್ಯಾನ್, ಲೂಯಿಸ್ ಲೋಬೋ, ಸರಸು ಬಂಗೇರಾ, ಚಂದ್ರಶೇಖರ್ ಶೆಟ್ಟಿ, ಉಪೇಂದ್ರ ಮೆಂಡನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ನವೀನ್‌ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಸದಾಶಿವ ದೇವಾಡಿಗ, ಮಂಜುನಾಥ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಮದನ್ ಕುಮಾರ್, ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಮೀಣ ಜನಸಂಪರ್ಕ ಅಭಿಯಾನದ ಬಗ್ಗೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕುಶಲ ಶೆಟ್ಟಿ ಸ್ವಾಗತಿಸಿ, ನೀರೆ ಕೃಷ್ಣ ಶೆಟ್ಟಿ ವಂದಿಸಿದರು. ಮಾಧ್ಯಮ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.







