ಉಡುಪಿ: ಅಂಚೆಕಾರ್ಡ್ ಮೂಲಕ ಶಿಕ್ಷಣ ಕಾರ್ಯಕ್ರಮ
ಉಡುಪಿ, ಅ.15: ರಾಷ್ಟ್ರೀಯ ಅಂಚೆ ಸಪ್ತಾಹದ ಪ್ರಯುಕ್ತ ಟಪ್ಪಾಲು ದಿನದ ಅಂಗವಾಗಿ ಉಡುಪಿ ಅಂಚೆ ವಿಭಾಗ ಮತ್ತು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಅಂಚೆಕಾರ್ಡ್ ಮುಖಾಂತರ ಶಿಕ್ಷಣ’ ಎಂಬ ವಿನೂತನ ಕಾರ್ಯಕ್ರಮ ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜು ಸಭಾಭವನದಲ್ಲಿ ಗುರುವಾರ ನಡೆಯಿತು.
ಈವರೆಗೆ ಆನ್‌ಲೈನ್‌ನಲ್ಲಿ ನಡೆಸಿದ ಪಾಠಗಳ ಚುಟುಕು ಪ್ರಶ್ನೆಗಳನ್ನು ಅಂಚೆಕಾರ್ಡ್‌ನಲ್ಲಿ ಬರೆದು ಮಕ್ಕಳಿಗೆ ತಲುಪಿಸಿ, ಅವರಿಂದ ಅಂಚೆ ಕಾರ್ಡ್‌ನಲ್ಲಿ ಉತ್ತರ ಬರೆಯಿಸಿ ಪಡೆಯುವ ಒಂದು ವಿಶಿಷ್ಟ ಪ್ರಯೋಗವನ್ನು ಕಾಲೇಜಿನಲ್ಲಿ ನಡೆಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಮಧು ಸೂದನ್ ಭಟ್ ಉಪನ್ಯಾಸಕರ ಪ್ರಶ್ನಾವಳಿಗಳ ಕಾರ್ಡ್‌ನ್ನು ಉಡುಪಿ ಅಂಚೆ ವಿಭಾಗದ ಉಪ ಅಧೀಕ್ಷಕ ಧನಂಜಯ ಆಚಾರ್ಯರಿಗೆ ಹಸ್ತಾಂತರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಧುಸೂದನ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅಂಚೆ ಇಲಾಖೆಯ ಮಾರುಕಟ್ಟೆ ವಿಭಾಗದ ಪೂರ್ಣಿಮಾ ಜನಾರ್ದನ್ ಅಂಚೆ ದಿನದ ಬಗೆಗೆ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಉಡುಪಿ ಅಂಚೆ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇ ರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಹರಿಕೇಶವ್ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ಜಿ.ಜಿ ಈ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.







