ಬಿಜೆಪಿ ಸರಕಾರದ ಸರ್ವಾಧಿಕಾರ, ದುರಹಂಕಾರದ ನಡವಳಿಕೆ: ಸಿದ್ದರಾಮಯ್ಯ
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಫ್ಐಆರ್ ವಿಚಾರ

ಬೆಂಗಳೂರು, ಅ.15: ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಹೋಗುತ್ತಿದ್ದಾಗ ನಮ್ಮನ್ನು ಬಲಾತ್ಕಾರವಾಗಿ ತಡೆಯುವ ಪ್ರಯತ್ನ ಮಾಡಿದ್ದ ಪೊಲೀಸರು, ಅಭ್ಯರ್ಥಿ ಕುಸುಮಾ ಮತ್ತು ನನ್ನ ಬೆಂಗಾವಲು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ರಾಜ್ಯ ಬಿಜೆಪಿ ಸರಕಾರದ ಸರ್ವಾಧಿಕಾರ, ದುರಹಂಕಾರ ಮತ್ತು ಹತಾಶೆಯ ನಡವಳಿಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಚುನಾವಣೆಗಳು ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ನಡೆಯಬೇಕು ಮತ್ತು ಪೊಲೀಸರು ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕು. ಈ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಪಕ್ಕಕ್ಕೆ ಸರಿಸಿ ಪೊಲೀಸರೇ ಅತ್ಯುತ್ಸಾಹದಿಂದ ದೂರು ದಾಖಲಿಸಿರುವುದರಲ್ಲಿ ರಾಜ್ಯ ಸರಕಾರದ ಕೈವಾಡ ಎದ್ದು ಕಾಣುತ್ತಿದೆ ಎಂದು ದೂರಿದ್ದಾರೆ.
ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರು ಚುನಾವಣಾ ನೀತಿ ಸಂಹಿತೆ ಮತ್ತು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದರೂ ಕಣ್ಣುಮುಚ್ಚಿಕೊಂಡಿದ್ದ ಪೊಲೀಸರ ನಡವಳಿಕೆ ಖಂಡನೀಯ. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ನಮ್ಮ ಪಕ್ಷ ದೂರು ನೀಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ, ಮುಂದಿನ ದಿನಗಳಲ್ಲಿ ಈ ರೀತಿ ಅಧಿಕಾರ ದುರುಪಯೋಗದ ಮೂಲಕ ನಮ್ಮನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿರುವುದು ಸ್ಪಷ್ಟ. ಇದಕ್ಕೆ ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.







