ಆರೋಗ್ಯ ಯೋಜನೆ: ಜನಪ್ರತಿನಿಧಿಗಳಿಗೆ 2.5 ವರ್ಷಗಳಲ್ಲಿ 2 ಕೋಟಿ ರೂ. ಖರ್ಚು ಮಾಡಿದ ಸರಕಾರ
ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಬೆಂಗಳೂರು, ಅ.15: ಆರೋಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರಕಾರ ಜನಪ್ರತಿನಿಧಿಗಳಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 2 ಕೋಟಿ ರೂ. ವೆಚ್ಚ ಮಾಡಿರುವುದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
ಸಾಮಾಜಿಕ ಹೋರಾಟಗಾರ ಹೆಚ್.ಎಂ ವೆಂಕಟೇಶ್ ಈ ಬಗ್ಗೆ ಮಾಹಿತಿ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ವಿಧಾನಸಭೆ ಸಚಿವಾಲಯ ಮಾಹಿತಿ ನೀಡಿದ್ದು, ಎರಡೂವರೆ ವರ್ಷಗಳಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅವರವರ ಕುಟುಂಬಸ್ಥರಿಗೆ ಸೇರಿ 2 ಕೋಟಿ ರೂ. ಖರ್ಚು ಮಾಡಲಾಗಿದೆ.
2018-19 ರಲ್ಲಿ 37 ಶಾಸಕರಿಗೆ 98,95,315 ರೂ. ವೆಚ್ಚ ಮಾಡಲಾಗಿದೆ. 2019-20ರಲ್ಲಿ 37 ಶಾಸಕರಿಗೆ 60,54,159 ರೂ. ವೆಚ್ಚ ಮಾಡಲಾಗಿದೆ 2020-21ರ (ಸೆಪ್ಟೆಂಬರ್ ವರೆಗೆ) 13 ಮಂದಿ ಜನಪ್ರತಿನಿಧಿಗಳಿಗೆ 24,82,355 ವೆಚ್ಚ ಮಾಡಲಾಗಿದೆ. ಎರಡೂವರೆ ವರ್ಷದಲ್ಲಿ ಒಟ್ಟು 87 ಜನಪ್ರತಿನಿಧಿಗಳ ಹಾಗೂ ಅವರವರ ಕುಟುಂಬಸ್ಥರಿಗೆ ಸರಕಾರ ಒಟ್ಟು 1,84,31,829 ವೆಚ್ಚ ಮಾಡಿದೆ.
ಈ ಪೈಕಿ ಅತಿ ಹೆಚ್ಚು ಹಣ ಪಡೆದಿರುವ ಶಾಸಕರು ಅಂದರೆ ಕನಿಜಾ ಫಾತಿಮಾ ಖಮರುಲ್ಲಾ ಇಸ್ಲಾಂ. ಅವರಿಗಾಗಿ 23,84,858 ರೂ. ಖರ್ಚು ಆಗಿದೆ. ಇನ್ನು ನರಸಿಂಹನಾಯಕ್ (ರಾಜೂಗೌಡ)ರಿಗೆ 12,89,146 ರೂ. ವೆಚ್ಚ ಮಾಡಲಾಗಿದೆ. ಸಮಾಜಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಎರಡು ಬಾರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಬಿ.ಶ್ರೀರಾಮುಲು ಕುಟುಂಬಸ್ಥರಿಗಾಗಿ ಮೊದಲ ಬಾರಿ 4,96,200 ರೂ. ಮತ್ತು ಎರಡನೇ ಬಾರಿ 4,65,319 ರೂ. ಹಣವನ್ನ ವೆಚ್ಚ ಮಾಡಲಾಗಿದೆ. ಇನ್ನು ಪ್ರೊ.ಲಿಂಗಣ್ಣ ಕುಟುಂಬಕ್ಕೆ ಆರೋಗ್ಯ ಚಿಕಿತ್ಸೆ ವೆಚ್ಚ ಒಟ್ಟು 11,31,023 ರೂ. ತಗಲಿದೆ.







