ಫೇಸ್‌ಬುಕ್ ನಕಲಿ ಖಾತೆಯಲ್ಲೂ ಹಣ ದೋಚುವ ದಂಧೆ !

ಮಂಗಳೂರು, ಅ.15: ಆನ್ ಲೈನ್ ಮೂಲಕ ಹಣ ದೋಚುವ ದಂಧೆ ಅವ್ಯಾಹತವಾಗಿರುವಂತೆಯೇ, ಇದೀಗ ಫೇಸ್‌ಬುಕ್‌ನಲ್ಲಿ ಗಣ್ಯ ವ್ಯಕ್ತಿಗಳ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಹಣ ದೋಚುವ ದಂಧೆ ನಡೆಯುತ್ತಿದೆ.
ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅವರು ತಮ್ಮ ಆಪ್ತರಿಂದ ತುರ್ತಾಗಿ ಹಣದ ಸಹಾಯ ಯಾಚಿಸುವಂತೆ ನಕಲಿ ಸಂದೇಶಗಳು ರವಾನೆಯಾಗುತ್ತಿವೆ.
ಅರ್ಜಂಟಾಗಿ ಇಂತಿಷ್ಟು ಹಣ ಬೇಕು, ನಾಳೆ ಬೆಳಗ್ಗೆಯೇ ಹಿಂತಿರುಗಿಸುತ್ತೇನೆ. ಎಂದು ಗಣ್ಯ ವ್ಯಕ್ತಿಗಳೇ ತಮ್ಮ ಆಪ್ತರಿಂದ ಹಣ ಕೇಳುವ ರೀತಿಯಲ್ಲಿ ನಕಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಸಂದೇಶ ಕಳುಹಿಸುವ ಖದೀಮರು, 8 ಸಾವಿರ, 10 ಸಾವಿರ, 15 ಸಾವಿರ ಹೀಗೆ ನಿಗದಿತ ಮೊತ್ತದ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡಿ ವಂಚನೆಗೊಳಗಾದ ಬಹುತೇಕ ಮಂದಿ ಮರ್ಯಾದೆಗೆ ಅಂಜಿ ದೂರು ನೀಡದೆ ಸುಮ್ಮನಾಗುತ್ತಿದ್ದಾರೆ. ಈ ರೀತಿಯ ವಂಚನೆಗಳು ಈಗ ರಾಜಕೀಯ ಪಕ್ಷದ ನಾಯಕರನ್ನೂ ಕಾಡುತ್ತಿದೆ.
ಫೇಸ್ ಬುಕ್ ನಕಲಿ ಖಾತೆ ಬಳಸಿ ವಂಚಿಸುತ್ತಿರುವ ಘಟನೆಗಳು ಈಗ ಬಿಜೆಪಿಯ ಹಲವು ನಾಯಕರನ್ನೂ ಕಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವರನ್ನು ಈ ರೀತಿ ಟಾರ್ಗೆಟ್ ಮಾಡಲಾಗಿದೆ. ಬಿಜೆಪಿ ನಾಯಕ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ದೇವದಾಸ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರು ಮುಂತಾದವರ ಹೆಸರಿನಲ್ಲಿ ಹಣ ಕೇಳುವ ಘಟನೆಗಳು ನಡೆದಿವೆ. ದೇವದಾಸ ಶೆಟ್ಟಿಯವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದಿರುವ ಖದೀಮರು ಕಾರ್ಯಕರ್ತರಿಗೆ, ಆಪ್ತರಿಗೆ ಫ್ರೆಂಡ್ ರಿಕ್ವೆಸ್ಟ್ ಮೆಸೇಜ್‌ಗಳನ್ನು ಕಳುಹಿಸಲಾರಂಭಿಸಿದ್ದಾರೆ. ಜೊತೆಗೆ ಹಣದ ಬೇಡಿಕೆಯನ್ನೂ ಇಡಲಾರಂಭಿಸಿದ್ದಾರೆ.
ದೇವದಾಸ ಶೆಟ್ಟಿಯವರು ಸಂಕಷ್ಟದಲ್ಲಿದ್ದಾರೆ ಅವರಿಗೆ ಹಣದ ಅವಶ್ಯಕತೆ ಇದೆ ಎಂದು ನಂಬಿದ ಅವರ ಆಪ್ತರು ಪೇಟಿಎಂ, ಗೂಗಲ್ ಪೇ ಮೂಲಕ ಹಣ ಪಾವತಿಸಲು ಮುಂದಾಗಿದ್ದರು. ಫ್ರಾಂಕ್ಲಿನ್ ಮೊಂತೇರೋ ಸೇರಿದಂತೆ ಹಲವು ಮಂದಿ ದೇವದಾಸ ಶೆಟ್ಟಿಯವರಿಗೆ ಕರೆ ಮಾಡಿ ಏನು ಹಣದ ಅವಶ್ಯಕತೆ ? ಎಷ್ಟು ಬೇಕು ಎಂದು ಕೇಳಿದ್ದರಿಂದ ವಂಚಕರ ದಂಧೆ ಬಯಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಎಸ್‌ಐಯವರಿಗೂ ದೇವದಾಸ ಶೆಟ್ಟಿಯವರ ನಕಲಿ ಖಾತೆಯಿಂದ ಫ್ರಂಡ್ ರಿಕ್ವೆಸ್ಟ್ ಹೋಗಿದೆ.
ತಮ್ಮ ನಕಲಿ ಫೇಸ್‌ಬುಕ್ ಖಾತೆ ಬಗ್ಗೆ ಅರಿತ ದೇವದಾಸ ಶೆಟ್ಟಿಯವರು ತಕ್ಷಣ ತಮ್ಮ ಖಾತೆಯಿಂದ ಕಾರ್ಯಕತರಿಗೆ ನಕಲಿ ಸಂದೇಶದ ಬಗ್ಗೆ ಫೇಸ್ ಬುಕ್‌ನಲ್ಲಿ ಹೇಳಿಕೊಂಡಿದ್ದು, ಕಾರ್ಯಕರ್ತರು, ಆಪ್ತರು ಮತ್ತು ಸ್ನೇಹಿತರನ್ನು ಎಚ್ಚರಿಸಿದ್ದಾರೆ.
‘ಸ್ನೇಹಿತರೆ ನನ್ನ ಹೆಸರಿನಲ್ಲಿ ಯಾರೋ ಫೇಸ್ ಬುಕ್‌ನಲ್ಲಿ ಫೇಕ್ ಎಕೌಂಟ್ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ದಯವಿಟ್ಟು ಅದನ್ನು ಪರಿಗಣಿಸಬೇಡಿ. ಮತ್ತು ಅವರಿಂದ ಮೋಸಕ್ಕೆ ಒಳಗಾಗಬೇಡಿ. ನಿಮಗೆ ಯಾವುದಾದರೂ ಮೆಸೇಜ್ ಕಳುಹಿಸಿದ್ದರೆ ನನ್ನ ಗಮನಕ್ಕೆ ತನ್ನಿ’ ಎಂದು ದೇವದಾಸ್ ಶೆಟ್ಟಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವಂತಹ ಇಂತಹ ಮೋಸದ ಜಾಲದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.







