ಪಿಎಂ ಕೇರ್ಸ್ ನಿಧಿ: 50 ಕೇಂದ್ರ ಸರಕಾರಿ ಇಲಾಖೆಗಳ ಸಿಬ್ಬಂದಿಯ ವೇತನ ಕಡಿತಗೊಳಿಸಿ ಕೊಟ್ಟ ದೇಣಿಗೆ ಎಷ್ಟು ಗೊತ್ತಾ?

ಹೊಸದಿಲ್ಲಿ,ಅ.15: ಕೇಂದ್ರ ಸರಕಾರದ ಕನಿಷ್ಠ 50 ಇಲಾಖೆಗಳು ತಮ್ಮ ಸಿಬ್ಬಂದಿಗಳ ವೇತನಗಳಲ್ಲಿ ಕಡಿತಗೊಳಿಸಿ 157.23 ಕೋ.ರೂ.ಗಳನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆಯನ್ನಾಗಿ ಸಲ್ಲಿಸಿವೆ ಎಂದು ಆಂಗ್ಲ ಮಾಧ್ಯಮವೊಂದು ಪಡೆದುಕೊಂಡಿರುವ ಆರ್‌ಟಿಐ ಉತ್ತರಗಳು ಬಹಿರಂಗಗೊಳಿಸಿವೆ.
ಕೇಂದ್ರ ಸರಕಾರದ ಈ ಇಲಾಖೆಗಳ ಪೈಕಿ 146.72 ಕೋ.ರೂ.ಗಳ ದೇಣಿಗೆಯೊಂದಿಗೆ ಭಾರತೀಯ ರೈಲ್ವೆಯು ಅಗ್ರಸ್ಥಾನದಲ್ಲಿದೆ. 5.18 ಕೋ.ರೂ.ಗೂ ಅಧಿಕ ದೇಣಿಗೆಯನ್ನು ನೀಡಿರುವ ಬಾಹ್ಯಾಕಾಶ ಇಲಾಖೆಯು ನಂತರದ ಸ್ಥಾನದಲ್ಲಿದೆ. ಈ ಎಲ್ಲ ದೇಣಿಗೆಗಳನ್ನು ಸಿಬ್ಬಂದಿಗಳ ವೇತನಗಳಲ್ಲಿಯ ಕಡಿತಗಳಿಂದ ಸಂಗ್ರಹ ಮಾಡಲಾಗಿದೆ ಎಂದು ಆರ್‌ಟಿಐ ಉತ್ತರವು ತೋರಿಸಿದೆ.
ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತನ್ನ ಸಿಬ್ಬಂದಿಗಳ ವೇತನಗಳಿಂದ ಕಡಿತಗೊಳಿಸಿ 1.14 ಕೋ.ರೂ.ಗಳ ದೇಣಿಗೆಯನ್ನು ಸಲ್ಲಿಸಿದ್ದರೆ,2020,ಮಾರ್ಚ್‌ನಿಂದ ಆಗಸ್ಟ್‌ವರೆಗೆ ಅಧಿಕಾರಿಗಳ ವೇತನಗಳಿಂದ 43.26 ಲ.ರೂ.ಗಳನ್ನು ಕಡಿತಗೊಳಿಸಿ ಪಿಎಂ ಕೇರ್ಸ್ ನಿಧಿಗೆ ದೇಣಿಗೆಯನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ರಕ್ಷಣಾ ಇಲಾಖೆ (26.20 ಲ.ರೂ.),ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (18.51 ಲ.ರೂ.),ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವಾಲಯ (16.91 ಲ.ರೂ.) ಮತ್ತು ರಾಷ್ಟ್ರಪತಿಗಳ ಸಚಿವಾಲಯ (12.05 ಲ.ರೂ.)ದಂತಹ ಇತರ ಇಲಾಖೆಗಳು ಪಿಎಂ ಕೇರ್ಸ್ ನಿಧಿಗೆ ದೇಣಿಗೆಗಳನ್ನು ಸಲ್ಲಿಸಿದ್ದು,ಇದಕ್ಕಾಗಿ ತಮ್ಮ ಸಿಬ್ಬಂದಿಗಳ ವೇತನಗಳಲ್ಲಿ ಕಡಿತ ಮಾಡಿವೆ ಎಂದು ಆರ್‌ಟಿಐ ಉತ್ತರಗಳು ತೋರಿಸಿವೆ.
50 ಇಲಾಖೆಗಳು ಒಟ್ಟು 157.23 ಕೋ.ರೂ.ಗಳ ದೇಣಿಗೆ ಸಲ್ಲಿಸಿರುವ ಜೊತೆಗೆ ಲೋಕಸಭಾ (52.54 ಲ.ರೂ.)ಮತ್ತು ರಾಜ್ಯಸಭಾ (36.39 ಲ.ರೂ.) ಸಚಿವಾಲಯಗಳೂ ತಮ್ಮ ಸಿಬ್ಬಂದಿಗಳ ವೇತನಗಳಿಂದ ದೇಣಿಗೆಗಳನ್ನು ಸಲ್ಲಿಸಿವೆ.
ಆದರೆ ಪ್ರಧಾನಿ ಕಚೇರಿ,ಗೃಹ ಸಚಿವಾಲಯದ ಅಧೀನದಲ್ಲಿರುವ ಇಲಾಖೆಗಳಂತಹ ಹಲವಾರು ಪ್ರಮುಖ ಇಲಾಖೆಗಳು ಮತ್ತು ಅಂಚೆ ಯಂತಹ ಇತರ ಇಲಾಖೆಗಳು ದೇಣಿಗೆಯ ವಿವರಗಳನ್ನು ಕೋರಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗಳಿಗೆ ಉತ್ತರಿಸುವ ಗೋಜಿಗೇ ಹೋಗಿಲ್ಲ.
ಆಗಸ್ಟ್‌ನಿಂದ ಸೆಪೆಂಬರ್‌ವರೆಗಿನ ಅವಧಿಯಲ್ಲಿ ವಿವಿಧ ಇಲಾಖೆಗಳಿಗೆ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಜೈವಿಕ ತಂತ್ರಜ್ಞಾನ ಇಲಾಖೆ,ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆ ಹಾಗೂ ಔಷಧಿ ಇಲಾಖೆಗಳು ವಿವಿಧ ಕಾರಣಗಳನ್ನು ಉಲ್ಲೇಖಿಸಿ ಮಾಹಿತಿಗಳನ್ನು ಹಂಚಿಕೊಳ್ಳಲು ನಿರಾಕರಿಸಿವೆ.
ಈವರೆಗೆ ಸಾರ್ವಜನಿಕ ಕ್ಷೇತ್ರದ ಕನಿಷ್ಠ 38 ಉದ್ಯಮಗಳು ತಮ್ಮ ಕಾರ್ಪೊರೇಟ್ ನಿಧಿಗಳ ಮೂಲಕ ಪಿಎಂ ಕೇರ್ಸ್ ನಿಧಿಗೆ 2,105 ಕೋ.ರೂ.ಗಳ ದೇಣಿಗೆಗಳನ್ನು ನೀಡಿವೆ, ಜೊತೆಗೆ ವಿವಿಧ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಗಳ ವೇತನಗಳಿಂದ ಕಡಿತಗೊಳಿಸಿ ಒಟ್ಟು 21.81 ಕೋ.ರೂ.ಗಳ ದೇಣಿಗೆಗಳನ್ನು ಸಂಗ್ರಹಿಸಿವೆ ಎಂದು ಈ ಹಿಂದೆ ಆರ್‌ಟಿಐ ಉತ್ತರಗಳು ಬೆಳಕಿಗೆ ತಂದಿದ್ದವು.
ಕೊರೋನ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಪತ್ತು ಪರಿಹಾರಕ್ಕೆ ತುರ್ತು ಕ್ರಮವಾಗಿ 2020,ಮಾ.27ರಂದು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿತ್ತು.ಪಿಎಂ ಕೇರ್ಸ್‌ನ ಅಧಿಕೃತ ಜಾಲತಾಣದಂತೆ ಮಾ.31ಕ್ಕೆ ಇದ್ದಂತೆ ನಿಧಿಯಲ್ಲಿ 3,076.62 ಕೋ.ರೂ.ಗಳು ಸಂಗ್ರಹವಾಗಿದ್ದು,ಈ ಪೈಕಿ 3075.85 ಕೋ.ರೂ.ಗಳು ‘ಸ್ವಯಂಪ್ರೇರಿತ ದೇಣಿಗೆ ’ಗಳಾಗಿದ್ದವು.
ಪಿಎಂ ಕೇರ್ಸ್ ನಿಧಿಯಲ್ಲಿಯ ಹಣವನ್ನು ಹೇಗೆ ವೆಚ್ಚ ಮಾಡಲಾಗುತ್ತದೆ ಎಂದು ಕೇಳಿ ಹಲವಾರು ಆರ್‌ಟಿಐ ಅರ್ಜಿಗಳನ್ನು ಪ್ರಧಾನಿ ಕಚೇರಿಗೆ ಸಲ್ಲಿಸಿದ ಬಳಿಕವೂ ಅದು ಮಾಹಿತಿಗಳನ್ನು ಹಂಚಿಕೊಳ್ಳಲು ನಿರಾಕರಿಸಿತ್ತು ಮತ್ತು ನಂತರ ನಿಧಿಯು ಆರ್‌ಟಿಐ ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದು ಹೇಳಿ ಕೈತೊಳೆದುಕೊಂಡಿತ್ತು.







