ಒಟಿಟಿ ನಿಯಂತ್ರಣ ಕೋರಿ ಪಿಐಎಲ್ ಸಲ್ಲಿಕೆ: ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯದ ನೋಟಿಸ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಅ.15: ಸ್ವಾಯತ್ತ ಸಂಸ್ಥೆಯೊಂದರಿಂದ ನೆಟ್ಫ್ಲಿಕ್ಸ್ ಮತ್ತು ಅಮೆಝಾನ್ ಪ್ರೈಮ್ನಂತಹ ‘ಓವರ್ ದಿ ಟಾಪ್(ಒಟಿಟಿ)’ ಪ್ಲಾಟ್ಫಾರ್ಮ್ಗಳ ನಿಯಂತ್ರಣವನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಕೇಂದ್ರ ಸರಕಾರ,ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಇಂಟರ್ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಕ್ಕೆ ನೋಟಿಸ್ಗಳನ್ನು ಹೊರಡಿಸಿದೆ.
ವಿವಿಧ ಒಟಿಟಿ/ಸ್ಟ್ರೀಮಿಂಗ್ ಮತ್ತು ಡಿಜಿಟಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರಗೊಳ್ಳುವ ವಿಷಯಗಳ ಮೇಲೆ ನಿಗಾಯಿರಿಸಲು ಮತ್ತು ನಿರ್ವಹಣೆಗಾಗಿ ಸೂಕ್ತ ಮಂಡಳಿ/ಸಂಸ್ಥೆಯನ್ನು ರಚಿಸುವಂತೆ ಕೋರಿ ನ್ಯಾಯವಾದಿಗಳಾದ ಶಶಾಂಕ ಶೇಖರ ಝಾ ಮತ್ತು ಅಪೂರ್ವಾ ಅರ್ಹಾತಿಯಾ ಅವರು ಈ ಪಿಐಎಲ್ ಸಲ್ಲಿಸಿದ್ದಾರೆ.
ದೇಶದಲ್ಲಿ ಸಿನಿಮಾ ಮಂದಿರಗಳು ಸದ್ಯೋಭವಿಷ್ಯದಲ್ಲಿ ಆರಂಭಗೊಳ್ಳುವ ಸಾಧ್ಯತೆಗಳಿಲ್ಲ,ಹೀಗಾಗಿ ಒಟಿಟಿ/ಸ್ಟ್ರೀಮಿಂಗ್ ಮತ್ತು ವಿವಿಧ ಡಿಜಿಟಲ್ ಮಾಧ್ಯಮ ವೇದಿಕೆಗಳು ಸೆನ್ಸಾರ್ ಮಂಡಳಿಯಿಂದ ಯಾವುದೇ ಪ್ರಮಾಣಪತ್ರ ಪಡೆದುಕೊಳ್ಳುವ ಚಿಂತೆಯಿಲ್ಲದೆ ನಿರ್ಮಾಪಕರು ಮತ್ತು ಕಲಾವಿದರು ತಮ್ಮ ಚಿತ್ರಗಳು ಮತ್ತು ಧಾರಾವಾಹಿಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳಾಗಿವೆ. ಸದ್ಯಕ್ಕೆ ಇಂತಹ ವೇದಿಕೆಗಳಲ್ಲಿ ಪ್ರಸಾರಗೊಳ್ಳುವ ವಿಷಯಗಳನ್ನು ನಿಯಂತ್ರಿಸಲು ಯಾವುದೇ ಕಾನೂನು ಅಥವಾ ಸ್ವಾಯತ್ತ ಸಂಸ್ಥೆಯಿಲ್ಲ. ಈ ಲೋಪವನ್ನು ಸರಿಪಡಿಸಲು ನಿಯಂತ್ರಣಗಳನ್ನು ತರುವಂತೆ ಸಾರ್ವಜನಿಕರು ಮತ್ತು ನ್ಯಾಯಾಂಗದಿಂದ ಸರಕಾರವು ಒತ್ತಡವನ್ನು ಎದುರಿಸುತ್ತಿದೆ. ಆದರೂ ಸಂಬಂಧಿಸಿದ ಸರಕಾರಿ ಇಲಾಖೆಗಳು ಇಂತಹ ವೇದಿಕೆಗಳನ್ನು ನಿಯಂತ್ರಿಸಲು ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನೆಟ್ಫ್ಲಿಕ್ಸ್,ಅಮೆಝಾನ್ ಪ್ರೈಮ್,ಝೀ5 ಮತ್ತು ಹಾಟ್ಸ್ಟಾರ್ ಸೇರಿದಂತೆ ಯಾವುದೇ ಒಟಿಟಿ/ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು 2020 ಫೆಬ್ರವರಿಯಲ್ಲಿ ಸರಕಾರವು ಒದಗಿಸಿದ್ದ ಸ್ವನಿಯಂತ್ರಣ ಘೋಷಣೆಗಳಿಗೆ ಸಹಿ ಹಾಕಿಲ್ಲ ಎಂದು ಅರ್ಜಿಯು ಬೆಟ್ಟು ಮಾಡಿದೆ.
ಈ ಹಿಂದೆ ಪ್ರತ್ಯೇಕ ಪ್ರಕರಣವೊಂದರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು,ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಮತ್ತು ಮಾಧ್ಯಮಗಳಲ್ಲಿ ದ್ವೇಷ ಭಾಷಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸುವ ಮುನ್ನ ನ್ಯಾಯಾಲಯವು ಅಮಿಕಸ್ ಜ್ಯೂರಿಗಳ ಸಮಿತಿಯೊಂದನ್ನು ರಚಿಸಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.







