ಫ್ರಾನ್ಸ್: ಕೊರೋನ ವೈರಸ್ ನಿರ್ಬಂಧಗಳು ಮತ್ತೆ ಜಾರಿಗೆ
ವಾರಾಂತ್ಯದಿಂದ ರಾತ್ರಿ ಕರ್ಫ್ಯೂ

ಪ್ಯಾರಿಸ್, ಅ. 15: ಕೊರೋನ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಫ್ರಾನ್ಸ್ ಬುಧವಾರ ದೇಶದಲ್ಲಿ ಮತ್ತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ ಹಾಗೂ ರಾಜಧಾನಿ ಪ್ಯಾರಿಸ್ ಸೇರಿದಂತೆ ಒಂಬತ್ತು ನಗರಗಳಲ್ಲಿ ಶನಿವಾರದಿಂದ ಕರ್ಫ್ಯೂ ವಿಧಿಸಿದೆ.
‘‘ನಾವು ಈಗ ಕ್ರಮ ತೆಗೆದುಕೊಳ್ಳಲೇಬೇಕಾಗಿದೆ. ವೈರಸ್‌ನ ಹರಡುವಿಕೆಗೆ ನಾವು ತಡೆ ಹಾಕುವುದು ಅನಿವಾರ್ಯವಾಗಿದೆ’’ ಎಂದು ಸರಕಾರಿ ಟೆಲಿವಿಶನ್‌ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹೇಳಿದರು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲವೂ ಸಂಪೂರ್ಣವಾಗಿ ಮುಚ್ಚಿರುತ್ತದೆ ಹಾಗೂ ಈ ನಿರ್ಬಂಧವು ಆರು ವಾರಗಳ ಕಾಲ ಜಾರಿಯಲ್ಲಿರುತ್ತದೆ ಎಂದರು.
ಲಯಾನ್, ಮೆಡಿಟರೇನಿಯನ್ ಬಂದರು ನಗರ ಮಾರ್ಸಿಲಿ ಮತ್ತು ನೈರುತ್ಯದ ಟೌಲೋಸ್ ಮುಂತಾದ ಬೃಹತ್ ನಗರಗಳು ಈ ನಿರ್ಬಂಧದ ವ್ಯಾಪ್ತಿಗೆ ಒಳಪಡುತ್ತವೆ. ಒಟ್ಟು ಸುಮಾರು 6.7 ಕೋಟಿ ಜನಸಂಖ್ಯೆಯ ಪೈಕಿ ಸುಮಾರು 2 ಕೋಟಿ ಜನರು ನಿರ್ಬಂಧಗಳಿಗೆ ಒಳಪಡಲಿದ್ದಾರೆ.
ಜರ್ಮನಿ, ಸ್ಪೇನ್, ಐರ್‌ಲ್ಯಾಂಡ್‌ಗಳಲ್ಲೂ ನಿರ್ಬಂಧ
ಜರ್ಮನಿ ಮತ್ತು ಐರ್‌ಲ್ಯಾಂಡ್ ದೇಶಗಳಲ್ಲೂ ಕೊರೋನ ವೈರಸ್ ಸಂಬಂಧಿ ಕಠಿಣ ನಿರ್ಬಂಧಗಳನ್ನು ಮರುಜಾರಿಗೊಳಿಸಲಾಗಿದೆ.
ಜರ್ಮನಿಯಲ್ಲಿ, ಕೂಟಗಳು ಮತ್ತು ಮುಖಗವಸು ಧರಿಸುವಿಕೆ ಬಗ್ಗೆ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಕಠಿಣ ಕ್ರಮಗಳನ್ನು ಘೋಷಿಸಿದರು.
ಸ್ಪೇನ್‌ನಲ್ಲಿ, ಸಂಪೂರ್ಣ ಕ್ಯಾಟಲೋನಿಯ ವಲಯದಲ್ಲಿ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು 15 ದಿನಗಳ ಕಾಲ ಮುಚ್ಚಿರುತ್ತವೆ.
ನೆದರ್‌ಲ್ಯಾಂಡ್ಸ್ ಮತ್ತು ಐರ್‌ಲ್ಯಾಂಡ್ ದೇಶಗಳಲ್ಲೂ ಹೊಸದಾಗಿ ಕೊರೋನ ವೈರಸ್ ನಿರ್ಬಂಧಗಳನ್ನು ಘೋಷಿಸಲಾಗಿದೆ.