ವ್ಯಕ್ತಿಯ ಗುಂಡಿಕ್ಕಿ ಹತ್ಯೆ: ಇಂತಹ ಘಟನೆ ಎಲ್ಲಿಯೂ ಸಂಭವಿಸಬಹುದು ಎಂದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ಬಲ್ಲಿಯಾ(ಉ.ಪ್ರ): ಗ್ರಾಮದಲ್ಲಿ ಸಭೆ ನಡೆಯುತ್ತಿದ್ದಾಗ ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲೇ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಸಾಯಿಸಿರುವ ಘಟನೆ ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅಮಾನತುಗೊಳಿಸಲು ಆದೇಶ ನೀಡಿದ್ದಾರೆ.
ದುರ್ಜನ್ ಪುರ ಗ್ರಾಮದಲ್ಲಿ ಸೇರಿದ್ದ ಜನರ ನಡುವೆ ಗಲಾಟೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಂಜೂರಾಗಿದ್ದ ರೇಶನ್ ಅಂಗಡಿಯನ್ನು ರದ್ದುಪಡಿಸಿದ್ದರು. ಆ ನಂತರ ಶೂಟೌಟ್ ಘಟನೆ ನಡೆದಿದೆ ಎಂದು ಎಸ್ಪಿ ದೇವೇಂದ್ರ ನಾಥ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
46ರ ವಯಸ್ಸಿನ ಜಯ ಪ್ರಕಾಶ್ ನನ್ನು ಬಿಜೆಪಿ ಕಾರ್ಯಕರ್ತ ಹಾಗೂ ಪಕ್ಷದ ಶಾಸಕ ಸುರೇಂದ್ರ ಸಿಂಗ್ ಅವರ ಆಪ್ತ ಧೀರೇಂದ್ರ ಸಿಂಗ್ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಗುಂಡು ಹಾರಾಟದ ಬಳಿಕ ಕಾಲ್ತುಳಿತವೂ ನಡೆದಿರುವುದು ಘಟನೆಯ ವೀಡಿಯೊದಲ್ಲಿ ಸೆರೆಯಾಗಿದೆ.
ಮೂರು ಸುತ್ತುಗಳ ಗುಂಡಿನ ಹಾರಾಟದ ವೇಳೆ ಹೊಲದಲ್ಲಿ ಸಾಕಷ್ಟು ಜನರು ಸೇರಿರುವ ದೃಶ್ಯ ವೀಡಿಯೊದಲ್ಲಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಶಾಸಕ ಸುರೇಂದ್ರ ಸಿಂಗ್, "ಆರೋಪಿ ಬಿಜೆಪಿಯ ಮಾಜಿ ಸೈನಿಕರ ಘಟಕದ ಮುಖ್ಯಸ್ಥನಾಗಿದ್ದ ಎಂದು ದೃಢಪಡಿಸಿದ್ದು, ಅಂತಹ ಘಟನೆ ಎಲ್ಲಿಯಾದರೂ ಸಂಭವಿಸಬಹುದು'' ಎಂದು ಉದ್ದಟತನದ ಹೇಳಿಕೆ ನೀಡಿದ್ದಾರೆ.
"ಇದು ಎಲ್ಲಿಯಾದರೂ ಸಂಭವಿಸಬಹುದಾದ ಘಟನೆ. ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿತ್ತು. ಈ ವಿಚಾರದಲ್ಲಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಲುತ್ತದೆ'' ಎಂದು ಬಿಜೆಪಿ ಶಾಸಕ ಹೇಳಿದರು.







