ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್‍ಐಆರ್ ಖಂಡಿಸಿ ಮಹಿಳಾ ಕಾರ್ಯಕರ್ತರಿಂದ ಧರಣಿ

ಬೆಂಗಳೂರು, ಅ.16: ಅಧಿಕಾರ ದುರುಪಯೋಗ ಮಾಡಿಕೊಂಡು ಸುಳ್ಳು ದೂರು ದಾಖಲಿಸಿರುವ ರಾಜರಾಜೇಶ್ವರಿನಗರ ಇನ್‍ಸ್ಪೆಕ್ಟರ್ ನವೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿದ ನೂರಾರು ಮಹಿಳಾ ಕಾರ್ಯಕರ್ತರು ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಎಫ್‍ಐಆರ್ ದಾಖಲಿಸಿದ್ದಾರೆಂದು ಆರೋಪಿಸಿದರು. ಅನಂತರ ಪೊಲೀಸ್ ಮಹಾನಿರ್ದೇಶಕರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಪತ್ರ ಕಳುಹಿಸಿಕೊಟ್ಟರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್, ಪ್ರಜಾಪ್ರಭುತ್ವ ವ್ಯವಸ್ಥೆಯು ಗಟ್ಟಿಯಾಗಿರಲು ನಿಷ್ಪಕ್ಷವಾದ ಚುನಾವಣೆ ನಡೆಯಬೇಕು ಎಂಬುದು ಅಂಬೇಡ್ಕರ್ ಆಶಯವಾಗಿದೆ. ಆದರೆ, ಆರ್‍ಆರ್ ನಗರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಉದ್ದೇಶಪೂರ್ವಕವಾಗಿ ಎಫ್‍ಐಆರ್ ದಾಖಲಿಸಿರುವುದು ಸಂವಿಧಾನ ವಿರೋಧಿಯಾಗಿದೆ ಎಂದರು.
ಇತರೆ ಪಕ್ಷಗಳು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಸೂಕ್ತ ಮಾರ್ಗದರ್ಶನ ನೀಡಿದ ಪೊಲೀಸರು, ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಬೇಕಂತಲೇ ಗೊಂದಲ ಸೃಷ್ಟಿ ಮಾಡಿದ್ದಾರೆ. ಕೋವಿಡ್ ನಿಮಯಗಳ ಕುರಿತು ಅರಿವಿದ್ದರೂ ಮಾಜಿ ಸಿಎಂ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಾವಲು ವಾಹನವನ್ನು ಬ್ಯಾರಿಕೇಡ್ ಒಳಗೆ ಬರಲು ಅನುಮತಿ ನೀಡಿ, ಅನಂತರ ಅವರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಇದು ರಾಜಕೀಯ ಪ್ರೇರಿಕ ಕೃತ್ಯವಾಗಿದೆ ಎಂದು ಅವರು ಅಪಾದಿಸಿದರು.
ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ರಾಜರಾಜೇಶ್ವರಿ ನಗರದ ಇನ್‍ಸ್ಪೆಕ್ಟರ್ ನವೀನ್ ಬಿಜೆಪಿ ಅಭ್ಯರ್ಥಿ ಮುನಿರತ್ನಂ ಅವರಿಗೆ ಆತ್ಮೀಯರಾಗಿದ್ದಾರೆ. ಹೀಗಾಗಿ, ಅವರ ಪರ ವಕಾಲತ್ತು ವಹಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 11.45ರಲ್ಲಿ ನಾಮಪತ್ರ ಸಲ್ಲಿಸಲು ಸ್ಥಳಕ್ಕಾಗಮಿಸಿದ್ದರೆ, ಇನ್‍ಸ್ಪೆಕ್ಟರ್ 11 ಗಂಟೆಗೆ ಎಂದು ನಮೂದಿಸಿ ಎಫ್‍ಐಆರ್ ಮಾಡಿದ್ದಾರೆ. ಇದು ಪೊಲೀಸರ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಆಪಾದಿಸಿದರು.
ಉದ್ದೇಶಪೂರ್ವಿತ ಎಫ್‍ಐಆರ್ ಮಾಡಿರುವ ಪೊಲೀಸ್ ಇನ್‍ಸ್ಪೆಕ್ಟರ್ ನವೀನ್‍ರನ್ನು ಅಮಾನತು ಮಾಡಬೇಕು. ಕುಸುಮಾ ಮೇಲೆ ದಾಖಲಿಸಿರುವ ಎಫ್‍ಐಆರ್ ಗೆ ಎಸಿಪಿ ಅನ್ನು ತನಿಖಾಧಿಕಾರಿ ಮಾಡಿ ವಿಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸಿ, ಯಾವುದೇ ಅಪರಾಧ ಕಂಡುಬಂದಲ್ಲಿ ಅಂತಿಮ ವರದಿ ಸಲ್ಲಿಕೆ ಮಾಡಬೇಕು. ಆರ್‍ಆರ್ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯಲು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ನೇಮಿಸಬೇಕು ಹಾಗೂ ಕುಸುಮಾ ಅವರಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
.jpg)







