ಮಂಗಳೂರು ತಾಪಂ ಮಾಜಿ ಸದಸ್ಯ ಕೊಲೆಯತ್ನ ಪ್ರಕರಣ : ನಾಲ್ವರ ಬಂಧನ

ಮಂಗಳೂರು, ಅ.16: ಮಂಗಳೂರು ತಾಪಂ ಮಾಜಿ ಸದಸ್ಯ ಯೂಸುಫ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿ ಗಳನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಳಾಯಿಬೆಟ್ಟು ನಿವಾಸಿ ಸಂದೇಶ್ (24), ವಳಚ್ಚಿಲ್ ನಿವಾಸಿ ಧನರಾಜ್ (23) ರಾಯಿ ನಿವಾಸಿ ಧನು ಯಾನೆ ಧನುಷ್ (24) ಬಂಟ್ವಾಳ ನಿವಾಸಿ ಸೂರಜ್ ಯಾನೆ ಜೀವನ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಯೂಸುಫ್ ಅವರು ಅ.12ರಂದು ಉಳಾಯಿಬೆಟ್ಟುವಿನಲ್ಲಿರುವ ತನ್ನ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕುಲಶೇಖರ್ ಕೊಗ್ಗರ ಹೋಟೆಲ್ ಬಳಿ ಬೈಕೊಂದು ಢಿಕ್ಕಿಯಾಗಿತ್ತು. ಯೂಸುಫ್ ತನ್ನ ಕಾರನ್ನು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ಸವಾರ ಕ್ಷಮೆ ಕೇಳಿದ್ದಾನೆ. ಅಷ್ಟರಲ್ಲಿ ಬಿಳಿ ಬಣ್ಣದ ಕಾರೊಂದು ಬಂದು ಅಡ್ಡ ನಿಂತಿದ್ದು, ಇದರಲ್ಲಿದ್ದ ಮೂವರು ಕಾರಿನಿಂದ ಇಳಿದು ಯೂಸುಫ್ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಳೇ ವೈಷಮ್ಯ ಕಾರಣ: ತನಿಖೆ ಆರಂಭಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ಸಂದೇಶ್ ಕೊಲೆ ಯತ್ನ ಪ್ರಕರಣದ ಸೂತ್ರಧಾರನಾಗಿದ್ದು, ಈತನಿಗೆ ಯೂಸುಫ್ ಮೇಲೆ ಹಳೇ ವೈಷಮ್ಯವಿತ್ತು. ಈ ಹಿನ್ನಲೆಯಲ್ಲಿ ಯೂಸುಫ್ ರ ಕೊಲೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಕಂಕನಾಡಿ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದಲ್ಲದೆ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಕಸ್ಟಡಿ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋವಿಡ್ ಪರೀಕ್ಷೆ ಹಿನ್ನಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.







