ಚಿನ್ನದ ಪದಕದ ಬದಲಿಗೆ ಡಿಡಿ ವಿತರಣೆ: ರಾಜ್ಯಪಾಲರಿಗೆ ಪತ್ರ ಬರೆದ ವಿದ್ಯಾರ್ಥಿಗಳ ಪೋಷಕರು
ಬೆಳಗಾವಿ, ಅ.16: ರ‍್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲಿಗೆ 1,070 ರೂ. ಮೊತ್ತದ ಡಿಡಿ ಕೊಟ್ಟು ಅಪಮಾನಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‍ಸಿಯು)ದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇವೆ ಎಂದು ವಿದ್ಯಾರ್ಥಿನಿ ಸೃಷ್ಟಿ ಗ್ಯಾನಿ ಮತ್ತು ಅವರ ತಂದೆ ಗುರು ಅಮರೇಂದ್ರ ಗ್ಯಾನಿ ತಿಳಿಸಿದ್ದಾರೆ.
ಶುಕ್ರವಾರ ಬೆಳಗಾವಿ ನಗರದಲ್ಲಿ ಡಿಡಿ ಕೊಟ್ಟಿರುವುದನ್ನು ಪ್ರದರ್ಶಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುರು ಅಮರೇಂದ್ರ ಅವರು, ಪುತ್ರಿ ಸೃಷ್ಟಿ ಬಿ.ಎ. ಅಪರಾಧ ವಿಜ್ಞಾನ ಮತ್ತು ಅಪರಾಧ ನ್ಯಾಯಿಕ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಆಕೆಗೆ ಚಿನ್ನದ ಪದಕ ಘೋಷಿಸಲಾಗಿತ್ತು. ಈಚೆಗೆ ನಡೆದ ಘಟಿಕೋತ್ಸವದ ಬಳಿಕ ಡಿಡಿ ನೀಡಿದ್ದಾರೆ. ಇತರ ವಿಭಾಗಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೂ ಹೀಗೆಯೇ ಮಾಡಲಾಗಿದೆ. ಈ ಬಗ್ಗೆ ಕುಲಪತಿಯವರೂ ಬೇಜವಾಬ್ದಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಆರೋಪಿಸಿದರು.
ಚಿನ್ನದ ಪದಕ ಗಳಿಸಬೇಕೆಂಬುದು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ, ಆರ್‍ಸಿಯು ನಮ್ಮಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ಮಣ್ಣುಪಾಲು ಮಾಡಿದೆ ಎಂದು ಸೃಷ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ವರ್ಷದಿಂದ ಚಿನ್ನದ ಪದಕ
‘ಪ್ರಾಯೋಜಕರಿಂದ ಹೆಚ್ಚಿನ ಠೇವಣಿ ಮೊತ್ತ ಸಂಗ್ರಹವಾಗದ ಹಿನ್ನೆಲೆಯಲ್ಲಿ ರ‍್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಬರೀ ಪ್ರಮಾಣ ಪತ್ರ, ನಗದು ಬಹುಮಾನ ನೀಡಲಾಗಿದೆ. ಮುಂದಿನ ವರ್ಷ ಹೆಚ್ಚಿನ ಠೇವಣಿ ಮೊತ್ತ ಸಂಗ್ರಹಿಸಿ ಚಿನ್ನದ ಪದಕ ನೀಡಲಾಗುವುದು.’
-ಪ್ರೊ.ಬಸವರಾಜ ಪದ್ಮಸಾಲಿ, ರಾಣಿ ಚನ್ನಮ್ಮ ವಿವಿ ಕುಲಸಚಿವ







