ಆಸ್ಪತ್ರೆಯ ಶವಾಗಾರದ ಫ್ರೀಝರ್ ನಿಂದ ಬಳಿಕ ರಕ್ಷಿಸಲ್ಪಟ್ಟಿದ್ದ ವೃದ್ಧ ಸಾವು

ಚೆನ್ನೈ, ಅ.16: ಆಸ್ಪತ್ರೆಯ ಶೈತ್ಯಾಗಾರದ ಫ್ರೀಝರ್‌ನಲ್ಲಿ 24 ಗಂಟೆ ಬಂಧಿಯಾಗಿದ್ದರೂ ಪವಾಡಸದೃಶವಾಗಿ ಜೀವಂತವಾಗಿ ರಕ್ಷಿಸಲ್ಪಟ್ಟ 74 ವರ್ಷದ ವೃದ್ಧ ಶುಕ್ರವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅಸೌಖ್ಯದಿಂದ ಗಂಭೀರಾವಸ್ಥೆಯಲ್ಲಿದ್ದ ಬಾಲಸುಬ್ರಮಣ್ಯ ಕುಮಾರ್ ಎಂಬವರನ್ನು ಸೇಲಂ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಇವರು ಸೋಮವಾರ ಮೃತಪಟ್ಟಿರುವುದಾಗಿ ತಿಳಿಸಿದ್ದ ಆಸ್ಪತ್ರೆಯವರು, ಮೃತದೇಹವನ್ನಿಡುವ ಶೈತ್ಯಾಗಾರದ ಫ್ರೀಝರ್‌ನಲ್ಲಿ ಇವರನ್ನು ಇರಿಸಿದ್ದರು. ಆದರೆ ಮಂಗಳವಾರ ಮೃತದೇಹ ಹಸ್ತಾಂತರ ಪ್ರಕ್ರಿಯೆ ಸಂದರ್ಭ ಬಾಲಸುಬ್ರಮಣ್ಯ ಕುಮಾರ್ ಇನ್ನೂ ಜೀವಂತವಾಗಿ ಅರೆಪ್ರಜ್ಞಾವಸ್ಥೆಯಲ್ಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಈತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಬಾಲಸುಬ್ರಮಣ್ಯ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ವೃದ್ಧ ಮೃತಪಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವಾಗ ಅರೆ ಪ್ರಜ್ಞಾವಸ್ತೆಯಲ್ಲಿದ್ದರು ಎಂದು ಸರಕಾರಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಈ ಮಧ್ಯೆ, ಬಾಲಸುಬ್ರಮಣ್ಯ ಕುಮಾರ್‌ರನ್ನು ಫ್ರೀಝರ್‌ನಿಂದ ಜೀವಂತವಾಗಿ ರಕ್ಷಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರ ಸರವಣನ್, ಆತನ ಆತ್ಮ ಇನ್ನೂ ದೇಹದಿಂದ ಹೊರಗೆ ಹೋಗಿರಲಿಲ್ಲ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರೋಗಿ ಮೃತನಾಗಿರುವುದಾಗಿ ಆಸ್ಪತ್ರೆಯವರು ಸಹಿ ಹಾಕಿದ ಪತ್ರ ನೀಡಿದ ಬಳಿಕಷ್ಟೇ ಮೃತದೇಹವನ್ನು ಫ್ರೀಝರ್‌ನಲ್ಲಿ ಇರಿಸಿದ್ದಾಗಿ ಮೃತನ ಕುಟುಂಬದವರು ಹೇಳಿದ್ದಾರೆ. ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯವರ ನಿರ್ಲಕ್ಷದ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.







