ದೇಶದಲ್ಲಿ 15 ದಿನಗಳಲ್ಲಿ ಕೊರೋನ ಸೋಂಕು ಗರಿಷ್ಠ ಇಳಿಕೆ
ಹೊಸದಿಲ್ಲಿ, ಅ.17: ದೇಶದಲ್ಲಿ ಕೊರೋನ ವೈರಸ್ ಸೋಂಕು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಹದಿನೈದು ದಿನಗಳಲ್ಲಿ ಪ್ರಕರಣಗಳ ಇಳಿಕೆ ಪ್ರಮಾಣ ಗರಿಷ್ಠವಾಗಿದೆ. ಅಕ್ಟೋಬರ್ ಮೊದಲ ಪಾಕ್ಷಿಕದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ಪಾಕ್ಷಿಕಕ್ಕೆ ಹೋಲಿಸಿದರೆ ಶೇಕಡ 18ರಷ್ಟು ಕಡಿಮೆಯಾಗಿದ್ದು, ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ ಶೇಕಡ 19ರಷ್ಟು ಕಡಿಮೆಯಾಗಿದೆ.
ದೇಶದಲ್ಲಿ ಅಕ್ಟೋಬರ್ ಮೊದಲ 15 ದಿನಗಳಲ್ಲಿ 10,55,068 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಆಗಸ್ಟ್ ಉತ್ತರಾರ್ಧದ ಬಳಿಕ ಪಾಕ್ಷಿಕವೊಂದರಲ್ಲಿ ದಾಖಲಾದ ಕನಿಷ್ಠ ಸಂಖ್ಯೆ ಎನ್ನುವುದು ರಾಜ್ಯ ಸರಕಾರಗಳಿಂದ ಸಂಗ್ರಹಿಸಿದ ಅಂಕಿಅಂಶಗಳಿಂದ ದೃಢಪಟ್ಟಿದೆ. ಸೆಪ್ಟಂಬರ್ ಉತ್ತರಾರ್ಧದಲ್ಲಿ ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಖಡ 18.4ರಷ್ಟು ಕಡಿಮೆ.
ಹೊಸ ಕೊರೋನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಇದು ಸತತ ಎರಡನೇ ಬಾರಿ. ಸೆಪ್ಟಂಬರ್ 16-30ರ ಅವಧಿಯಲ್ಲಿ ಕೂಡಾ ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ಪಾಕ್ಷಿಕಕ್ಕೆ ಹೋಲಿಸಿದರೆ 2.9% ಕಡಿಮೆಯಾಗಿತ್ತು.
ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕೂಡಾ ಇದೇ ಪ್ರವೃತ್ತಿ ಕಂಡುಬಂದಿದೆ. ಅಕ್ಟೋಬರ್ ಮೊದಲಾರ್ಧದಲ್ಲಿ 13,474 ಮಂದಿ ಮೃತಪಟ್ಟಿದ್ದು, ಇದು ಹಿಂದಿನ ಪಾಕ್ಷಿಕಕ್ಕೆ ಹೋಲಿಸಿದರೆ ಶೇಕಡ 18.9ರಷ್ಟು ಕಡಿಮೆ. ಸೆಪ್ಟಂಬರ್ ಉತ್ತರಾರ್ಧದಲ್ಲಿ ಸಾವಿನ ಸಂಖ್ಯೆ ಮೊದಲ ಬಾರಿಗೆ ಶೇಕಡ 0.2ರಷ್ಟು ಕಡಿಮೆಯಾಗಿತ್ತು. ಸೆಪ್ಟಂಬರ್ ಮೊದಲಾರ್ಧದಲ್ಲಿ ಸಾವು ಹಾಗೂ ಒಟ್ಟು ಪ್ರಕರಣಗಳ ಸಂಖ್ಯೆ ಗರಿಷ್ಠ ಇತ್ತು. ಈ ಪಾಕ್ಷಿಕದಲ್ಲಿ ದೇಶದಲ್ಲಿ 13,31,660 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, 16,641 ಮಂದಿ ಮೃತಪಟ್ಟಿದ್ದರು. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 28.7 ಹಾಗೂ ಸಾವಿನಲ್ಲಿ ಶೇಕಡ 15.4ರಷ್ಟು ಹೆಚ್ಚಳ ಕಂಡುಬಂದಿತ್ತು.