ಸುಶಾಂತ್ ಮ್ಯಾನೇಜರ್ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಮಾಡಿದ ವಕೀಲ ಬಂಧನ

ದಿಶಾ ಸಾಲಿಯಾನ್
ಹೊಸದಿಲ್ಲಿ, ಅ.17: ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ (28) ಮೇಲೆ ಕೆಲ ಸೆಲೆಬ್ರಿಟಿಗಳು ಮತ್ತು ಮಹಾರಾಷ್ಟ್ರದ ಒಬ್ಬ ರಾಜಕಾರಣಿ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸಿದ ಆರೋಪದಲ್ಲಿ ವಕೀಲರೊಬ್ಬರನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಸುಶಾಂತ್ ಅವರ ಸೆಲೆಬ್ರಿಟಿ ಮ್ಯಾನೇಜರ್ ಆಗಿ ದಿಶಾ ಕಾರ್ಯ ನಿರ್ವಹಿಸುತ್ತಿದ್ದರು. ಸುಶಾಂತ್ ಸಾವಿನ ಪ್ರಕರಣ ಸಂಬಂಧ ಹಬ್ಬಿರುವ ಸುಳ್ಳು ಸುದ್ದಿಗಳು ಮತ್ತು ದ್ವೇಷಕಾರಕ ಸಂದೇಶಗಳ ವಿರುದ್ಧ ಸೈಬರ್ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದಕ್ಕೆ ಇದು ನಿರ್ದಶನವಾಗಿದೆ.
ದಿಶಾ ಪ್ರಿಯಕರ ವಾಸಿಸುತ್ತಿದ್ದ ಮಲದ್ನ ಅಪಾರ್ಟ್ಮೆಂಟ್ನಲ್ಲಿ ಜೂನ್ 19ರಂದು ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವಕೀಲ ವಿಭೋರ್ ಆನಂದ್(31) ನ್ಯಾಯಾಲಯದ ಎಚ್ಚರಿಕೆ ಬಳಿಕವೂ ಮಾನಹಾನಿಕರ ಪೋಸ್ಟ್ಗಳನ್ನು ಮಾಡುತ್ತಾ ಬಂದಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ನಿವಾಸದಿಂದ ಆತನನ್ನು ಬಂಧಿಸಿ ಗುರುವಾರ ತಡರಾತ್ರಿ ಮುಂಬೈಗೆ ಕರೆತಂದು ಎಸ್ಪಲಾಂಡ್ ಕೋರ್ಟ್ನಲ್ಲಿ ಹಾಜರುಪಡಿಸಲಾಯಿತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನಹಾನಿ), 501 (ಮಾನಹಾನಿಕರ ಎನಿಸಿದ ಬರಹದ ಮುದ್ರಣ ಅಥವಾ ಪ್ರಸರಣ), 504 (ಅವಮಾನ), 5005(2) (ಕುಚೋದ್ಯ), 509 (ಮಹಿಳೆಯ ಘನತೆಗೆ ಧಕ್ಕೆ ತರುವುದು) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 (ಅಶ್ಲೀಲ ಬರಹಗಳನ್ನು ಪ್ರಸರಿಸುವುದು) ಅನ್ವಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಕ್ಟೋಬರ್ 19ರರವರೆಗೆ ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.







