ತಗ್ಗದ ಕೃಷ್ಣಾ- ಭೀಮಾ ನದಿ ಪ್ರವಾಹ: ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಸೇನಾ ತಂಡ

ಬೆಂಗಳೂರು, ಅ. 18: ಒಂದು ವಾರದಿಂದ ಸುರಿದ ಮಳೆ ಹಾಗೂ ನೆರೆಯ ಮಹಾರಾಷ್ಟ್ರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಜನತೆ ರಕ್ಷಣಾ ಕಾರ್ಯಕ್ಕೆ ಸರಕಾರ ಮುಂದಾಗಿದೆ.
ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸೇನೆ ನಿಯೋಜನೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಕೊಂಚ ಇಳಿಮುಖವಾಗುತ್ತಿದ್ದರೂ, ಮನೆ, ಮಠ ಕಳೆದುಕೊಂಡಿರುವ ಜನತೆ ಉಟ್ಟ ಬಟ್ಟೆಯಲ್ಲೆ ಕಾಳಜಿ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಹಲವು ಗ್ರಾಮಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನೀರುಪಾಲಾಗಿದೆ.
ಈ ಮಧ್ಯೆ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ನಲುಗಿರುವ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅ.21ರ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ವಾಸ್ತವಿಕ ಪ್ರಮಾಣವನ್ನು ಅರಿಯಲು ವೈಮಾನಿಕ ಸಮೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಿದ್ದಾರೆ
ಮಳೆ ಪ್ರಮಾಣ ಕಡಿಮೆಯಾಗಿದ್ದರೂ ನೆರೆ ಹಾವಳಿ ಇನ್ನೂ ನಿಂತಿಲ್ಲ. ಇದರಿಂದಾಗಿ ಜನರು ತಮ್ಮ ಮನೆಗೆ ತೆರಳಲಾಗದೆ ಕಾಳಜಿ ಕೇಂದ್ರಗಳಲ್ಲಿ ಕಾಲ ಕಳೆಯುವಂತಾಗಿದೆ. ಮತ್ತೊಂದೆಡೆ ನದಿಗಳಲ್ಲಿ ನೀರಿನ ಪ್ರಮಾಣ ಅಧಿಕವಾಗುತ್ತಲೆ ಇದ್ದು, ಮತ್ತಷ್ಟು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗುತ್ತಿದ್ದು, ಹಲವು ಗ್ರಾಮಗಳ ರಸ್ತೆಗಳ ಸಂಪರ್ಕ ಸಂಪೂರ್ಣ ಕಡಿದು ಹೋಗಿದ್ದು, ನಡುಗಡ್ಡೆಗಳಾಗಿವೆ.
ಭೀಮಾ ನದಿ ನೀರು ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರ ತಾಲೂಕಿನ ಗಾಣಗಾಪುರಕ್ಕೆ ನೀರು ನುಗ್ಗಿ ಹಲವು ಮನೆಗಳು ಮತ್ತು ದೇಗುಲಗಳು ಜಲಾವೃತಗೊಂಡಿವೆ. ಕಲ್ಲೇಶ್ವರ ಸೇರಿದಂತೆ ಹಲವು ದೇಗುಲ ಮತ್ತು ಗ್ರಾಮದ ಮನೆಗಳು ನೀರು ಪಾಲಾಗಿದ್ದು, ಜನರು ಪರಿತಪಿಸುವಂತಾಗಿದೆ. ಆಫ್ಜಲ್‍ಪುರ ತಾಲೂಕಿನ ಕೆರಕನಹಳ್ಳಿ ಗ್ರಾಮವು ಭೀಮಾ ನದಿ ಪ್ರವಾಹಕ್ಕೆ ಸಿಲುಕಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ.
ಭೀಮಾ ನದಿಯ ಪ್ರವಾಹದ ಅಬ್ಬರಕ್ಕೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಜೋಳದೊಡಗಿ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ವಡೆಗೇರ ಮೂಲಕ ರಾಯಚೂರು, ಯಾದಗಿರಿ ನಡುವಂ ಸಂಪರ್ಕ ಕಡಿದು ಹೋಗಿದೆ. ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಮಾಡಿರುವ ಕಾರಣ ಅಕ್ಕಪಕ್ಕದ ಜೋಳದೊಡಗಿ, ಶಿವನೂರು, ಕೊಂಗಡಿ, ಗೋನಾಳಕ್ಕೆ ಪ್ರತಿವರ್ಷ ಪ್ರವಾಹ ತಪ್ಪಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ರಕ್ಷಣಾ ಕಾರ್ಯ: ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿರುವ ಅಫ್ಜಲ್‍ಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ಸಿಲುಕಿದ್ದ 225 ಮಂದಿಯನ್ನು ರಕ್ಷಣಾ ತಂಡ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ತಂಡಕ್ಕೆ ನೆರವಾಗುತ್ತಿದ್ದು, ಮೂರು ಸೇನಾ ತಂಡಗಳು ಅಫ್ಜಲ್‍ಪುರ, ಜೇವರ್ಗಿ ಹಾಗೂ ಶಹಾಬಾದ್ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದು, ನಿನ್ನೆ ರಾತ್ರಿಯಿಂದಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.







