ಮುತ್ತಯ್ಯ ಮುರಳೀಧರನ್ ಜೀವನಾಧರಿತ ಚಿತ್ರದಿಂದ ಹಿಂದೆ ಸರಿದ ಸೇತುಪತಿ

ಚೆನ್ನೈ: ಶ್ರೀಲಂಕಾದ ಕ್ರಿಕೆಟ್ ದಂತಕತೆ ಮುತ್ತಯ್ಯ ಮುರಳೀಧರನ್ ಕೋರಿಕೆಯ ಮೇರೆಗೆ ಅವರ ಜೀವನಚರಿತ್ರೆ ಆಧರಿತ 'ಬಯೋಪಿಕ್ 800' ಚಿತ್ರದಿಂದ ಹೊರಗುಳಿಯುವುದಾಗಿ ತಮಿಳು ನಟ ವಿಜಯ್ ಸೇತುಪತಿ ಸೋಮವಾರ ಪ್ರಕಟಿಸಿದ್ದಾರೆ.
ಮುರಳೀಧರನ್ ಬಯೋಪಿಕ್ ಘೋಷಣೆಯಾದ ಬಳಿಕ ತಮಿಳುನಾಡಿನಲ್ಲಿ ವಿವಾದ ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಸೇತುಪತಿ ಈ ಘೋಷಣೆ ಮಾಡಿದ್ದಾರೆ.
ಚಿತ್ರಕ್ಕೆ ಸಹಿ ಹಾಕಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದ ಸೇತುಪತಿ ಸೋಮವಾರ ಮುರಳೀಧರನ್ ಬರೆದ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಬಯೋಪಿಕ್ ನಿಂದಾಗಿ ತನಗೆ ಭವಿಷ್ಯದಲ್ಲಿ ಯಾವುದೇ ಅಡೆತಡೆಗಳು ಉಂಟಾಗಬಾರದು ಎಂಬ ಕಾರಣಕ್ಕೆ ಯೋಜನೆಯನ್ನು ಕೈಬಿಡುವಂತೆ ಮುರಳೀಧರನ್ ತನ್ನನ್ನು ಒತ್ತಾಯಿಸಿದ್ದರು ಎಂದರು.
ಚಿತ್ರದಲ್ಲಿ ನಟಿಸುವುದರಿಂದ ಸೇತುಪತಿ ವೃತ್ತಿಬದುಕಿಗೆ ಹಾನಿಯಾಗಬಹುದು. ಹೀಗಾಗಿ ಯೋಜನೆಯನ್ನು ತ್ಯಜಿಸುವಂತೆ ನಾನು ಅವರಿಗೆ ಹೇಳಿದ್ದೇನೆ ಎಂದು ಹೇಳಿಕೆಯೊಂದರಲ್ಲಿ ಮುರಳೀಧರನ್ ತಿಳಿಸಿದ್ದಾರೆ.
ಸೇತುಪತಿ ಸೋಮವಾರ ಮುರಳೀಧರನ್ ಹೇಳಿಕೆಯನ್ನು ಟ್ವಿಟರ್ ನಲ್ಲಿಹಂಚಿಕೊಂಡಿದ್ದು, ಥಾಂಕ್ಯೂ ಹಾಗೂ ಗುಡ್ ಬೈ ಎಂದು ಬರೆದಿದ್ದಾರೆ.





