ಸಾಮಾಜಿಕ ಮಾಧ್ಯಮದ ಬ್ರಾಹ್ಮಣ ವಿರೋಧಿ ಪೋಸ್ಟ್‌ಗೆ ದಲಿತ ವಕೀಲನ ಹತ್ಯೆ
ವಿಶೇಷ ತನಿಖಾ ತಂಡದ ತನಿಖೆಯಿಂದ ಬಹಿರಂಗ

ರಾಜ್‌ಕೋಟ್, ಅ. 19: ಸಾಮಾಜಿಕ ಮಾಧ್ಯಮದ ಬ್ರಾಹ್ಮಣ ವಿರೋಧಿ ಪೋಸ್ಟ್‌ಗಳು ದಲಿತ ವಕೀಲ ದೇವ್‌ಜಿ ಮಹೇಶ್ವರಿ ಅವರ ಹತ್ಯೆಗೆ ಕಾರಣವಾಯಿತು ಎಂಬುದು ವಿಶೇಷ ತನಿಖಾ ತಂಡ (ಸಿಟ್)ತನಿಖೆಯಿಂದ ಬಹಿರಂಗಗೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ದೇವ್‌ಜಿ ಮಹೇಶ್ವರಿ ಹಾಕಿದ ಪೋಸ್ಟ್ ಕುರಿತಂತೆ ಪ್ರಿಂಟರ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವ 22 ವರ್ಷದ ಭರತ್ ರಾವಲ್ ಹಾಗೂ ದೇವ್‌ಜಿ ಮಹೇಶ್ವರಿ ನಡುವೆ ಫೋನ್‌ನಲ್ಲಿ ವಾಗ್ವಾದ ನಡೆದಿತ್ತು. ಒಂದು ದಿನದ ಬಳಿಕ ಅಂದರೆ ಸೆಪ್ಟಂಬರ್ 25ರಂದು ಕಛ್ನ ರಾಪರ್ ಪಟ್ಟಣದಲ್ಲಿ ಭರತ್ ರಾವಲ್ ದೇವ್‌ಜಿ ಮಹೇಶ್ವರಿ ಅವರನ್ನು ಇರಿದು ಹತ್ಯೆಗೈದಿದ್ದಾನೆ.
ಮಹೇಶ್ವರಿ ಅವರ ಹತ್ಯೆ ನಡೆದ ಒಂದು ದಿನದ ಬಳಿಕ ಮುಂಬೈ ಪೊಲೀಸರು ಪ್ರಧಾನ ಆರೋಪಿ ಭರತ್ ರಾವಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭ ಭರತ್ ರಾವಲ್, ಸಾಮಾಜಿಕ ಜಾಲ ತಾಣದಲ್ಲಿನ ಬ್ರಾಹ್ಮಣರ ಕುರಿತು ಪೂರ್ವಾಗ್ರಹ ಹೊಂದಿದ ಪೋಸ್ಟ್‌ಗೆ ಸಂಬಂಧಿಸಿ ಮಹೇಶ್ವರಿಯನ್ನು ಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾನೆ. ಮಹೇಶ್ವರಿ ಅವರ ಪತ್ನಿ ಮೀನಾಕ್ಷಿಬೆನ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ 8 ಮಂದಿಯ ವಿರುದ್ಧದ ಪುರಾವೆಗಳು ಪೊಲೀಸರಿಗೆ ಇದುವರೆಗೆ ಪತ್ತೆಯಾಗಿಲ್ಲ.
‘‘ಮಹೇಶ್ವರಿ ಅವರು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬ್ರಾಹ್ಮಣರಿಗೆ ವಿರುದ್ಧವಾದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಆಗಾಗ ಅಪ್‌ಲೋಡ್ ಮಾಡುತ್ತಿದ್ದರು. ಈ ಬಗ್ಗೆ ಭರತ್ ರಾವಲ್ ಮಹೇಶ್ವರಿಗೆ ಫೋನ್ ಕರೆ ಮಾಡಿದ್ದ. ಫೋನಿನಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬ್ರಾಹ್ಮಣ ಸಮುದಾಯದ ವಿರುದ್ಧ ಸಾಮಾಜಿಕ ಮಾಧ್ಯಮದ ಪೋಸ್ಟ್‌ನ ಕಾರಣಕ್ಕೆ ಹುಟ್ಟಿಕೊಂಡ ವಿವಾದದ ಹಿನ್ನೆಲೆಯಲ್ಲಿ ಭರತ್ ರಾವಲ್, ಮಹೇಶ್ವರಿ ಅವರನ್ನು ಹತ್ಯೆಗೈದಿದ್ದಾನೆ ಎಂಬುದು ತನಿಖೆಯ ಸಂದರ್ಭ ಸಂಗ್ರಹಿಸಲಾದ ಪುರಾವೆಯಿಂದ ಬೆಳಕಿಗೆ ಬಂದಿದೆ’’ ಎಂದು ವಿಶೇಷ ತನಿಖಾ ತಂಡ ರವಿವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಡಿಐಜಿ ಜೆ.ಆರ್. ಮೊಥಾಲಿಯಾ ನೇತೃತ್ವದ 7 ಸದಸ್ಯರ ವಿಶೇಷ ತನಿಖಾ ತಂಡ (ಸಿಟ್)ದಲ್ಲಿ ಗಡಿ ವಲಯದ ಡಿಐಜಿ, ಕಛ್ (ಪೂರ್ವ), ಕಛ್ (ಪಶ್ಚಿಮ) ಹಾಗೂ ಪಟನ್ ಜಿಲ್ಲಾ ಪೊಲೀಸ್‌ನ ಅಧಿಕಾರಿಗಳು ಇದ್ದಾರೆ.







