ಮಂಗಳೂರು ದಸರಾ ಕವಿಗೋಷ್ಠಿ

ಮಂಗಳೂರು. ಅ.19: ವಿಜಯನಗರ ಅರಸರ ಕಾಲದಿಂದಲೂ ದಸರಾ ಸಾಹಿತ್ಯ-ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಪರಂಪರೆಯನ್ನು ಮೈಸೂರಿನ ಒಡೆಯರು ಮುಂದುವರಿಸಿದ್ದು, ಈಗಲೂ ಸರಕಾರ ಅದನ್ನು ಮುನ್ನಡೆಸುತ್ತಿದೆ. ಮೈಸೂರಿನಲ್ಲಿ ರಾಜ್ಯಮಟ್ಟದ ದಸರಾ ಕವಿಗೋಷ್ಠಿ ವಿವಿಧ ಭಾಷೆಗಳಲ್ಲಿ ನಡೆಯುವಂತೆ ಸ್ಥಳೀಯವಾಗಿಯೂ ಕರಾವಳಿಯ ವಿವಿಧಭಾಷೆಗಳಲ್ಲಿ ಸಾಹಿತ್ಯದ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ವೈಭವದಷ್ಟೇ ಆದ್ಯತೆಯೊಂದಿಗೆ ಆಯೋಜಿಸಬೇಕಾಗಿದೆ. ಅಕಾಡಮಿಗಳು ಮತ್ತು ಸಾಹಿತ್ಯಿಕ ಸಂಘಟನೆಗಳು ಈ ಬಗ್ಗೆ ಯೋಚಿಸಬೇಕು ಎಂದು ಕವಿ - ಕಲಾವಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ನಗರದ ನಮ್ಮ ಕುಡ್ಲ ಸಂಸ್ಥೆಯ ವತಿಯಿಂದ ‘ಮಂಗಳೂರು ದಸರಾ ಸಂಭ್ರಮ’ ದ ಅಂಗವಾಗಿ ನಡೆಸಿದ ’ಕರಾವಳಿ ಕಾವ್ಯ: ದಸರಾ ಕವಿಮೇಳ - 2020’ ಇದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಜರಗಿದ ಕವಿ ಮೇಳದಲ್ಲಿ ಕವಿಗಳಾದ ಡಾ.ಎಸ್.ಎಂ.ಶಿವಪ್ರಕಾಶ್, ನಾರಾಯಣ ರೈ ಕುಕ್ಕುವಳ್ಳಿ, ಕಾ.ವಿ. ಕೃಷ್ಣದಾಸ್, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಅಕ್ಷಯ ಆರ್. ಶೆಟ್ಟಿ, ಅಕ್ಷತಾ ರಾಜ್ ಪೆರ್ಲ,ವಿದ್ಯಾ ಶ್ರಿ ಎಸ್. ಶೆಟ್ಟಿ ಉಳ್ಳಾಲ, ಭಾಸ್ಕರ ರೈ ಕುಕ್ಕುವಳ್ಳಿ ಕವನಗಳನ್ನು ವಾಚಿಸಿದರು.
ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಅತಿಥಿಗಳನ್ನು ಗೌರವಿಸಿದರು.







