ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಮರು ಸ್ಥಾಪನೆ ಹೋರಾಟ ಮುಂದುವರಿಯಲಿದೆ: ಫಾರೂಕ್ ಅಬ್ದುಲ್ಲಾ

ಜಮ್ಮುಕಾಶ್ಮೀರ, ಅ. 19: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ಮರು ಸ್ಥಾಪನೆ ಹೋರಾಟ ಮುಂದುವರಿಯಲಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿ ಸೋಮವಾರ ಜಾರಿ ನಿರ್ದೇಶನಾಲಯ(ಈಡಿ)ದಿಂದ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಗಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಅಧಿಕಾರಿಗಳಿಂದ ಸುಮಾರು 7 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹಿಂದಿರುಗಿದ ಫಾರೂಕ್ ಅಬ್ದುಲ್ಲಾ, ‘‘ಒಂದು ವಿಷಯ ನೆನಪಿನಲ್ಲಿಡಿ. ನಾವು ಬಹು ದೂರ ಸಾಗಬೇಕಾಗಿದೆ. ಇದು ಸುದೀರ್ಘ ಹೋರಾಟ’’ ಎಂದಿದ್ದಾರೆ.
‘‘ಫಾರೂಕ್ ಅಬ್ದುಲ್ಲಾ ಜೀವಂತ ಇದ್ದರೂ ಸತ್ತರೂ ಹೋರಾಟ ಮುಂದುವರಿಯಲಿದೆ. ನಮ್ಮ ನಿರ್ಧಾರ ಬದಲಾಗುವುದಿಲ್ಲ. ನನ್ನನ್ನು ನೇಣಿಗೆ ಹಾಕಿದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ’’ ಎಂದು ಅವರು ಹೇಳಿದರು.
ಬಿಜೆಪಿ ಸರಕಾರ ಕಳೆದ ವರ್ಷ ಹಿಂದೆ ತೆಗೆದ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸಲು ಜಮ್ಮು ಹಾಗೂ ಕಾಶ್ಮೀರದ ಎಲ್ಲ ಜನರು ಹೋರಾಟ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಇದು ಫಾರೂಕ್ ಅಬ್ದುಲ್ಲಾರ ಅಥವಾ ನ್ಯಾಷನಲ್ ಕಾನ್ಫರೆನ್ಸ್‌ನ ಹೋರಾಟ ಮಾತ್ರ ಅಲ್ಲ. ಇದು ಎಲ್ಲ ಜನರ ಹೋರಾಟ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು. ಈಡಿ ಕಚೇರಿಯಿಂದ ಹೊರಬರುತ್ತಿರುವ ಸಂದರ್ಭ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫಾರೂಕ್ ಅಬ್ದುಲ್ಲಾ, ನನಗೆ ಯಾವುದೇ ಚಿಂತೆ ಇಲ್ಲ. ನಾನೇಕೆ ಚಿಂತೆ ಮಾಡಬೇಕು. ನನಗೆ ಇರುವ ಬೇಸರ ಎಂದರೆ, ಮದ್ಯಾಹ್ನ ಊಟ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಎಂದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಕೆಲಸ ಮಾಡಬೇಕು. ಅವರು ಅವರ ಕೆಲಸ ಮಾಡಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.







