ಲಾಕಪ್ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್
ಹೊಸದಿಲ್ಲಿ, ಅ.20: ಐವರು ಪೊಲೀಸ್ ಸಿಬ್ಬಂದಿ ಲಾಕಪ್ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರಕಾರ ಮತ್ತು ರಾಜ್ಯದ ಪೊಲೀಸ್ ಮತ್ತು ಕಾರಾಗೃಹ ವಿಭಾಗಗಳ ಮುಖ್ಯಸ್ಥರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ.
ಕಳೆದ ಮೇ ತಿಂಗಳಿನಲ್ಲಿ ಈ ಪ್ರಕರಣ ನಡದಿದೆ ಎನ್ನಲಾಗಿದ್ದು, ಐದು ತಿಂಗಳ ಬಳಿಕ ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ಬಂದಿತ್ತು. ಜೈಲು ವಾರ್ಡನ್ಗೆ ಇದನ್ನು ಮೇಲಧಿಕಾರಿಗಳಿಗೆ ವರದಿ ಮಾಡುವ ಧೈರ್ಯವೂ ಇರಲಿಲ್ಲ ಎಂದು ಎನ್ಎಚ್ಆರ್ಸಿ ಹೇಳಿಕೆ ನೀಡಿದೆ. ಲಾಕಪ್ನಲ್ಲಿ ಐದು ಮಂದಿ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆಪಾದಿಸಿದ ಹಿನ್ನೆಲೆಯಲ್ಲಿ ಎನ್ಎಚ್ಆರ್ಸಿ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾರಾಗೃಹಗಳ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ.
ಈ ಪ್ರಕರಣದ ಬಗ್ಗೆ ಡಿಐಜಿ ಶ್ರೇಣಿಗಿಂತ ಕಡಿಮೆ ಶ್ರೇಣಿ ಇಲ್ಲದ ಅಧಿಕಾರಿಯಿಂದ ತನಿಖೆ ನಡೆಸುವಂತೆಯೂ ಸೂಚಿಸಲಾಗಿದೆ.
"ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್ ಎಂಬಲ್ಲಿ ಕಳೆದ ಮೇ ತಿಂಗಳಿನಲ್ಲಿ 20 ವರ್ಷದ ಮಹಿಳೆಯೊಬ್ಬರನ್ನು 10 ದಿನಗಳ ಕಾಲ ಲಾಕಪ್ನಲ್ಲಿ ಕೂಡಿ ಹಾಕಿ ಐವರು ಪೊಲೀಸರು ಅತ್ಯಾಚಾರ ನಡೆಸಿದ್ದಾರೆ ಎಂದು ವರದಿಯಾಗಿದೆ"
ವರದಿಯಲ್ಲಿ ಉಲ್ಲೇಖಿಸಿದಂತೆ ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾದ ಮಹಿಳೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಮೇ 9ರಿಂದ 21ರ ನಡುವೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಆಪಾದಿಸಿದ್ದು, ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಒಬ್ಬರು ಈ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿದಾಗ ಹಿರಿಯ ಅಧಿಕಾರಿಗಳು ಅವರನ್ನು ಖಂಡಿಸಿದರು ಎಂದು ಮಹಿಳೆ ಆಪಾದಿಸಿದ್ದರು.