ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತ ವೇಲು ನಾಯ್ಕರ್ ವಿರುದ್ಧ ಎಫ್ಐಆರ್ ದಾಖಲು
ಚುನಾವಣೆ ಪ್ರಚಾರದ ವೇಳೆ ಗಲಾಟೆ ಹಿನ್ನೆಲೆ
![ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತ ವೇಲು ನಾಯ್ಕರ್ ವಿರುದ್ಧ ಎಫ್ಐಆರ್ ದಾಖಲು ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತ ವೇಲು ನಾಯ್ಕರ್ ವಿರುದ್ಧ ಎಫ್ಐಆರ್ ದಾಖಲು](https://www.varthabharati.in/sites/default/files/images/articles/2020/10/21/264287-1603287761.jpg)
ಬೆಂಗಳೂರು, ಅ. 21: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತ ವೇಲು ನಾಯ್ಕರ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬುಧವಾರ ಆರ್.ಆರ್.ನಗರದ ಲಕ್ಷ್ಮೀದೇವಿನಗರ ಬೂತ್ ನಂಬರ್ 156ರ ಬಳಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಜವರೇಗೌಡ ಹಾಗೂ ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತ ವೇಲು ನಾಯ್ಕರ್ ಹಲ್ಲೆ ನಡೆಸಿ, ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ನಡೆಸಲು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕವನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಜೊತೆಗೆ ಮಾಜಿ ಸಂಸದ ಧ್ರುವ ನಾರಾಯಣ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಚಾರ ಕಾರ್ಯದ ಬಳಿ ತೆರಳಿ ವೇಲು ನಾಯ್ಕರ್ ಮತ್ತು ಸಹಚರರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ರೇವಣ್ಣ, ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಶಾಸಕ ಬಾಲರಾಜ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆ ಎದುರು ಸೇರಿಕೊಂಡು ಪ್ರತಿಭಟನೆ ನಡೆಸಿದರು.
ಮುನಿರತ್ನ, ವೇಲು ನಾಯ್ಕರ್ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಪೊಲೀಸರು ಮುನಿರತ್ನ ಆಪ್ತ ವೇಲು ನಾಯ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕ್ರಮ ಕೈಗೊಂಡಿದ್ದಾರೆ.