ಬಿಗ್ಬಾಸ್ ಸ್ಪರ್ಧಿ ಆದಂ ಪಾಷಾಗೆ ನ.3ರವರೆಗೆ ನ್ಯಾಯಾಂಗ ಬಂಧನ
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ
ಬೆಂಗಳೂರು, ಅ.21: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬಿಗ್ಬಾಸ್ ಸ್ಪರ್ಧಿ ಆದಂ ಪಾಷಾಗೆ ನಗರದ ವಿಶೇಷ ಎನ್ಡಿಪಿಎಸ್ ಕೋರ್ಟ್ ನ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಬುಧವಾರ ವಿಚಾರಣೆ ನಡೆಸಿದ ವಿಶೇಷ ಎನ್ಡಿಪಿಎಸ್ ಕೋರ್ಟ್ ನ್ಯಾಯಪೀಠ, ಪಾಷಾಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. ಆದಂ ಪಾಷಾ ಈ ಹಿಂದೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಿಂಗ್ ಪಿನ್ ಅನಿಕಾಳ ಬಳಿ ಮಾದಕ ವಸ್ತು ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಮಾದಕ ವಸ್ತು ನಿಯಂತ್ರಣ ಘಟಕ(ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದರು.
ಆ.19ರಂದು ಎನ್ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದ ಅನಿಕಾ ಬಳಿ ಆದಂ ಪಾಷಾಗೆ ಸಂಪರ್ಕವಿತ್ತು. ವಿಚಾರಣೆ ವೇಳೆ ಅನಿಕಾಳಿಂದ ಆರೋಪಿ ಡ್ರಗ್ಸ್ ಖರೀದಿಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಾಷಾ ಕೂಡ ಬೇರೆಯವರಿಗೆ ಕೊಟ್ಟಿರುವ ಮಾಹಿತಿ ಇದೆ. ಈ ಕುರಿತ ಕೆಲವೊಂದು ಸಾಕ್ಷ್ಯ ಸಂಗ್ರಹಿಸಿ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು.
ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ನಲ್ಲಿ ಪಾಷಾಗೆ ಅನಿಕಾ ಪರಿಚಯ ಆಗಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ ಹೀಗಾಗಿ, ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ. ಅನಿಕಾ ಜತೆ ಯಾರು ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ನಲ್ಲಿ ಡ್ಯಾನ್ಸ್ ಮಾಡಲು ಹೋಗುತ್ತಿದೆ ಎಂದು ವಿಚಾರಣೆ ವೇಳೆ ಆದಂ ಪಾಷಾ ತಿಳಿಸಿದ್ದರು.