ಪುರಸಭೆ, ಪಪಂ ಅಧ್ಯಕ್ಷ, ಉಪಾಧ್ಯಕ್ಷ ಅಧಿಸೂಚನೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ನ.10ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ನಿರ್ದೇಶನ

ಬೆಂಗಳೂರು, ಅ.22: ರಾಜ್ಯದ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲು ಅಧಿಸೂಚನೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿ ಆದೇಶಿಸಿತು. ನ.10ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪ್ರಶ್ನಿಸಿ ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.
ಸರಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು, ಮೀಸಲಾತಿ ನಿಗದಿಪಡಿಸುವಾಗ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ತಡೆಯಾಜ್ಞೆ ನೀಡುವುದು ಸರಿಯಲ್ಲ. ಮೀಸಲಾತಿ ಅಧಿಸೂಚನೆಗೆ ತಡೆ ನೀಡಿರುವುದರಿಂದ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬವಾಗಲಿದೆ. ಹೀಗಾಗಿ, ತಡೆಯಾಜ್ಞೆ ತೆರವುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸರಕಾರದ ಮನವಿ ಪರಿಗಣಿಸಿದ ನ್ಯಾಯಪೀಠವು ಅಧಿಸೂಚನೆಗೆ ತಡೆ ನೀಡಿ ಅ.19ರಂದು ನೀಡಿದ್ದ ಮಧ್ಯಂತರ ಆದೇಶ ಹಿಂಪಡೆಯಿತು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ಹೈಕೋರ್ಟ್ ಏಕಸದಸ್ಯ ಪೀಠ ಅ.15ರಂದು ನೀಡಿದ್ದ ತಡೆಯಾಜ್ಞೆಯನ್ನು ಬುಧವಾರವಷ್ಟೇ ವಿಭಾಗೀಯ ಪೀಠ ತೆರವುಗೊಳಿಸಿತ್ತು.







