ಭಾರತದ 'ಗಾಳಿ ಕೊಳಕು' - ಟ್ರಂಪ್ ಹೇಳಿಕೆ ನಂತರ ಟ್ರೆಂಡಿಂಗ್ ಆಯಿತು `ಹೌಡಿ ಮೋದಿ'

ಹೊಸದಿಲ್ಲಿ,ಅ.23: ಎರಡನೇ ಮತ್ತು ಅಂತಿಮ ಸುತ್ತಿನ ಅಧ್ಯಕ್ಷೀಯ ಚರ್ಚೆಗಳ ಸಂದರ್ಭದಲ್ಲಿ ಭಾರತದಲ್ಲಿನ ‘ಕೊಳಕು ವಾಯು ’ವಿನ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿರುವ ಟೀಕೆಗೆ ಟ್ವಿಟರ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಹೌಡಿ ಮೋದಿ’ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು,ಹಲವರು ವಾಯುಮಾಲಿನ್ಯ ಸಮಸ್ಯೆಯನ್ನು ವಿಷಾದದೊಂದಿಗೆ ಒಪ್ಪಿಕೊಂಡಿದ್ದರೆ ಇನ್ನು ಹಲವರು ಟ್ರಂಪ್ ಜೊತೆಗಿನ ‘ಭಾರೀ ಸ್ನೇಹ’ದ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಕಿಚಾಯಿಸಿದ್ದಾರೆ. ಟ್ವಿಟರಿಗರು ಕಳೆದ ವರ್ಷ ಅಮೆರಿಕದ ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ನಡೆದಿದ್ದ ‘ಹೌಡಿ ಮೋದಿ ’ಕಾರ್ಯಕ್ರಮವನ್ನೂ ಬಿಟ್ಟಿಲ್ಲ.
ಕಳೆದ ತಿಂಗಳು ತನ್ನ ‘ಆಪ್ತ ಮಿತ್ರ’ಮೋದಿಯವರನ್ನು ಕೊಂಡಾಡಿ ಮುಂದಿನ ತಿಂಗಳು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರ ಬೆಂಬಲವನ್ನು ಯಾಚಿಸಿದ್ದ ಟ್ರಂಪ್ ಇದೀಗ ಅಧ್ಯಕ್ಷೀಯ ಚರ್ಚೆಗಳ ವೇಳೆ ಅಂಗಾರಾಮ್ಲ ವಾಯುವಿನ ಸೂಸುವಿಕೆಯನ್ನು ತಗ್ಗಿಸುವ ಮೂಲಕ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಸ್ತಿತ್ವಕ್ಕೆ ಬಂದಿರುವ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಸಂದರ್ಭ ಭಾರತದಲ್ಲಿಯ ವಾಯುಮಾಲಿನ್ಯವನ್ನು ಪ್ರಸ್ತಾಪಿಸಿದ್ದಾರೆ. ರಷ್ಯಾ ಮತ್ತು ಚೀನಾಗಳೂ ಕೊಳಕು ವಾಯುವಿನಿಂದ ತುಂಬಿವೆ ಎಂದಿದ್ದಾರೆ.
ಪ್ಯಾರಿಸ್ ಒಪ್ಪಂದಕ್ಕಾಗಿ ಮಿಲಿಯಾಂತರ ಉದ್ಯೋಗಗಳು ಮತ್ತು ಸಾವಿರಾರು ಕಂಪನಿಗಳನ್ನು ಬಲಿ ಕೊಡಲು ತಾನು ಸಿದ್ಧನಿಲ್ಲ. ಅದು ಅನ್ಯಾಯವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಚರ್ಚೆಯಲ್ಲಿ ಎದುರಾಳಿಯಾಗಿದ್ದ ಡೆಮಾಕ್ರಾಟ್ ಅಭ್ಯರ್ಥಿ ಜೋ ಬೈಡೆನ್ ಅವರು ಟ್ರಂಪ್ ಹೇಳಿಕೆಗೆ ಎದಿರೇಟು ನೀಡಿ,ಹವಾಮಾನ ಬದಲಾವಣೆಯು ಮಾನವ ಜನಾಂಗದ ಅಸ್ತಿತ್ವಕ್ಕೆ ಬೆದರಿಕೆಯಾಗಿದೆ. ಅದನ್ನು ಎದುರಿಸುವ ನೈತಿಕ ಹೊಣೆಗಾರಿಕೆ ನಮ್ಮ ಮೇಲಿದೆ ಎಂದಿದ್ದಾರೆ.
ಟ್ರಂಪ್ ಅವರ ಹೇಳಿಕೆಯಿಂದ ‘ಫಿಲ್ದಿ ಇಂಡಿಯಾ( ಕೊಳಕು ಭಾರತ) ’ಮತ್ತು ‘ಹೌಡಿ ಮೋದಿ ’ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿವೆ. ಹಲವರು ನಗರ ಪ್ರದೇಶಗಳಲ್ಲಿಯ ಮಾಲಿನ್ಯ ಪ್ರದೇಶಗಳ ಚಿತ್ರಗಳನ್ನು ಲಗತ್ತಿಸುವ ಮೂಲಕ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
‘ಇದು ನೋವಿನ ಸಂಗತಿ,ಆದರೆ ನಮ್ಮನ್ನು ಗೌರವಿಸುವಂತೆ ನಾವು ಯಾರನ್ನೂ ಬಲವಂತಗೊಳಿಸುವಂತಿಲ್ಲ. ಗೌರವವನ್ನು ಗಳಿಸಬೇಕೇ ಹೊರತು ಕೇಳಿ ಪಡೆಯುವುದಲ್ಲ. ಖಾಸಗಿ ಪಳೆಯುಳಿಕೆ ಇಂಧನ ವಾಹನಗಳನ್ನು ನಿರುತ್ತೇಜಿಸುವುದು,ಸಾರ್ವಜನಿಕ ಸಾರಿಗೆಗೆ ಸಬ್ಸಿಡಿ ಒದಗಿಸುವುದು,ಇ-ವಾಹನಗಳಿಗೆ ಉತ್ತೇಜನ, ವಾಹನರಹಿತ ವಲಯಗಳ ಸೃಷ್ಟಿ,ಸಾರ್ವಜನಿಕ ಸಾರಿಗೆ ದಿನ ಇವು ನಮ್ಮ ಮುಂದಿನ ಗುರಿಗಳಾಗಿರಬೇಕು ’ಎಂದು ಓರ್ವ ಬಳಕೆದಾರ ಹೊಗೆತುಂಬಿದ ದಿಲ್ಲಿಯ ಚಿತ್ರದೊಡನೆ ಟ್ವೀಟಿಸಿದ್ದರೆ,ಇನ್ನೋರ್ವ ಬಳಕೆದಾರ ದಿಲ್ಲಿಯಲ್ಲಿ ವಾಯುಮಾಲಿನ್ಯ ಮಟ್ಟದ ಮೇಲೆ ನಿಗಾಯಿರಿಸುವ ಕೇಂದ್ರ ಸರಕಾರದ ಆ್ಯಪ್ ಮತ್ತು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯ ವಾಯುಮಾಲಿನ್ಯ ಮಟ್ಟವನ್ನು ಅಳೆಯುವ ಇಂತಹುದೇ ಆ್ಯಪ್‌ನ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿ ‘ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ 567 ಮತ್ತು ವಾಷಿಂಗ್ಟನ್ ಡಿಸಿಯ ಸೂಚ್ಯಂಕ 25 ಆಗಿವೆ. ಇದಕ್ಕೆ ನಮ್ಮನ್ನೇ ನಾವು ದೂರಿಕೊಳ್ಳಬೇಕು. ನಾವು ನಮ್ಮ ರೀತಿಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ದೀಪಾವಳಿಗೆ ಮಾತ್ರ ಕಡಿಮೆ ಮಾಲಿನ್ಯದ ಉಪದೇಶ ಬೇಡ,ಅದನ್ನು ವರ್ಷವಿಡೀ ಪಾಲಿಸಿ ’ಎಂದು ಬರೆದಿದ್ದಾರೆ.
ಮಂದಿರ,ಪ್ರತಿಮೆಗಳಿಗೆ ಖರ್ಚನ್ನು ಕಡಿಮೆ ಮಾಡಿ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಕ್ರಮಗಳನ್ನು ಕೈಗೊಳ್ಳುವಂತೆ ಓರ್ವ ಬಳಕೆದಾರರು ಸರಕಾರವನ್ನು ಆಗ್ರಹಿಸಿದ್ದಾರೆ.
‘ಹೌಡಿ ಮೋದಿ ’ಕುರಿತು ವ್ಯಂಗ್ಯಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ‘ಟ್ರಂಪ್-ಮೋದಿ ಗೆಳೆತನದ ಫಲಗಳು ಈಗ ಕಾಣಿಸುತ್ತಿವೆ. ಭಾರತದ ಕೋವಿಡ್ ಸಾವುಗಳ ಸಂಖ್ಯೆಯನ್ನು ಪ್ರಶ್ನಿಸಿರುವ ಟ್ರಂಪ್,ಅದು ವಾತಾವರಣದಲ್ಲಿ ಕೊಳಕುಗಳನ್ನು ಸೇರಿಸುತ್ತಿದೆ ಎಂದು ಹೇಳುತ್ತಿದ್ದಾರೆ.ಭಾರತವು ತೆರಿಗೆಗಳ ರಾಜ ಎಂದೂ ಅವರು ಹೇಳಿದ್ದಾರೆ. ಇದು ‘ಹೌಡಿ ಮೋದಿ ’ಯ ಫಲಿತಾಂಶ!’ಎಂದು ಹೇಳುವ ಮೂಲಕ ಪ್ರಧಾನಿಯ ಕಾಲೆಳೆದಿದ್ದಾರೆ.
ಅಧ್ಯಕ್ಷೀಯ ಚರ್ಚೆಗಳಲ್ಲಿ ಟ್ರಂಪ್ ಅವರಿಂದ ಭಾರತದ ಕುರಿತು ಇಂತಹ ನಿರಂತರ ಹೇಳಿಕೆಗಳ ಬಳಿಕ ಪ್ರಧಾನಿ ಮೋದಿಯವರು ‘ಹೌಡಿ ಮೋದಿ’ಕಾರ್ಯಕ್ರಮದಲ್ಲಿ ಟ್ರಂಪ್ ಉಮೇದುವಾರಿಕೆಯನ್ನು ತಾನು ಬೆಂಬಲಿಸಿದ್ದನ್ನು ಪುನರ್‌ಪರಿಶೀಲಿಸುವರೇ ಎಂದು ಹಿರಿಯ ಸಂಶೋಧಕ ಮತ್ತು ಅಂಕಣಕಾರ ಮೈಕೇಲ್ ಕ್ಲುಗ್‌ಮನ್ ಪ್ರಶ್ನಿಸಿದ್ದಾರೆ.
ಟ್ರಂಪ್‌ಗೆ ತೀಕ್ಷವಾಗಿ ಉತ್ತರಿಸುವಂತೆ ಮೋದಿಯವರನ್ನು ಆಗ್ರಹಿಸಿರುವ ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ ಅವರು,‘ಅಮೆರಿಕವನ್ನು ಎದುರು ಹಾಕಿಕೊಂಡಿದ್ದ ನಮ್ಮ ಕಬ್ಬಿಣದ ಮಹಿಳೆ ದಿ.ಇಂದಿರಾ ಗಾಂಧಿಯವರು ಹೆನ್ರಿ ಕಿಸಿಂಜರ್ ಮತ್ತು ರಿಚರ್ಡ್ ನಿಕ್ಸನ್ ಅವರಿಗೆ ಅವರ ಸ್ಥಾನಗಳನ್ನು ತೋರಿಸಿದ್ದನ್ನು ನೆನಪು ಮಾಡಿಕೊಳ್ಳಿ ’ಎಂದು ಹೇಳಿದ್ದಾರೆ.







