ಲಾಲೂಪ್ರಸಾದ್ ನ.9ಕ್ಕೆ ಜೈಲಿನಿಂದ ಹೊರಬರುತ್ತಾರೆ, ಮರುದಿನ ನಿತೀಶ್ ವಿದಾಯ ಹೇಳುತ್ತಾರೆ: ತೇಜಸ್ವಿಯಾದವ್

ಹಿಸುವಾ(ಬಿಹಾರ): ಬಿಹಾರದ ರಾಜಕಾರಿಣಿ ಲಾಲೂಪ್ರಸಾದ್ ಯಾದವ್ ನ.9ರಂದು ಜೈಲಿನಿಂದ ಹೊರಬರಲಿದ್ದು, ಮರುದಿನ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ ಹೇಳಲಿದ್ದಾರೆ ಎಂದು ರಾಷ್ಟ್ರೀಯ ಜನತಾದಳದ ಯುವ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಶುಕ್ರವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ತೇಜಸ್ವಿ ಯಾದವ್ ತಂದೆ ಲಾಲೂ ಯಾದವ್ ಜಾರ್ಖಂಡ್ ನಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಒಂದು ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದರು. ಇನ್ನೊಂದು ಪ್ರಕರಣದ ವಿಚಾರಣೆ ಬಾಕಿ ಇರುವ ಕಾರಣ ಅವರು ಜಾಮೀನಿನಲ್ಲಿ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ.
ಲಾಲೂಜಿ ನವೆಂಬರ್ 9ರಂದು ಜೈಲಿನಿಂದ ಬಿಡುಗಡೆಯಾಗಲಿದ್ದು, ಒಂದು ಕೇಸ್ ನಲ್ಲಿ ಜಾಮೀನು ಪಡೆದಿದ್ದು, ನ.9ರಂದು ಮತ್ತೊಂದು ಪ್ರಕರಣದಲ್ಲೂ ಅವರು ಜಾಮೀನು ಪಡೆಯಲಿದ್ದಾರೆ. ನನ್ನ ಹುಟ್ಟುಹಬ್ಬದ ದಿನದಂದೇ ಇದು ನಡೆಯಲಿದೆ. ಮರುದಿನ ನಿತೀಶ್ ಜೀ ಕೂಡ ವಿದಾಯ ಹೇಳಲಿದ್ದಾರೆ ಎಂದು ತೇಜಸ್ವಿ ಹೇಳಿದ್ದಾರೆ.
ಮೂರು ಹಂತದಲ್ಲಿ ನಡೆಯುವ ಬಿಹಾರ ಚುನಾವಣೆಯ ಫಲಿತಾಂಶವು ನ.10ರಂದು ಹೊರಬರಲಿದೆ.