ಮಣಿಪಾಲ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಅಸ್ತಿಮಜ್ಜೆ, ಕಸಿ ಸೇವೆ
ಮಣಿಪಾಲ, ಅ.23: ಮಣಿಪಾಲ ಕೆಎಂಸಿಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ (ಎಂಸಿಸಿಸಿಸಿ)ದಲ್ಲಿ ರೋಗಿಗಳ ಬಳಕೆಗಾಗಿ ಆ್ಯಪ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಶೀಘ್ರವೇ ಮುಂಬಯಿಂದ ಕೊಚ್ಚಿನ್‌ವರೆಗೆ ಈ ಕರಾವಳಿ ಭಾಗದಲ್ಲಿ ಲಭ್ಯವಿಲ್ಲದ ಅಸ್ತಿಮಜ್ಜೆ ಹಾಗೂ ಕಸಿ ಸೇವೆಗಳನ್ನೂ ಇಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಶುಕ್ರವಾರ ಕೆಎಂಸಿ ಮಣಿಪಾಲದ ಎಂಸಿಸಿಸಿಸಿಯ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಅಸ್ತಿಮಜ್ಜೆ, ಕಸಿ ಸೇವೆಗಳನ್ನು ಆರಂಭದಲ್ಲಿ ಆರು ಹಾಸಿಗೆಗಳೊಂದಿಗೆ (4 ವಯಸ್ಕರು, 2 ಮಕ್ಕಳ) ಪ್ರಾರಂಭಿಸುವುದು ನಮ್ಮ ಮುಂದಿನ ಯೋಜನೆ. ಅಲ್ಲದೇ ಮಕ್ಕಳ ಪ್ರಶಾಮಕ ಆರೈಕೆ, ಮೂತ್ರಪಿಂಡದ ಬೆಂಬಲ ಆರೈಕೆ, ನರವಿಜ್ಞಾನ ಪ್ರಶಾಮಕ ಆರೈಕೆ ಸೇವೆಗಳನ್ನು ಪ್ರಾರಂಭಿ ಸಲು ಉದ್ದೇಶಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಸ್ಟ್ರೇಲಿಯ ಸರಕಾರದ ‘ಕ್ಯಾನ್ಸರ್ ಆಸ್ಟ್ರೇಲಿಯ’ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಡೊರೊಥಿ ಕೀಫೆ ಭಾಗವಹಿಸಿ ಮಾತನಾಡಿ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಶುಭ ಹಾರೈಸಿದರು.
ಎಂಸಿಸಿಸಿಸಿ ಅಭಿವೃದ್ಧಿಪಡಿಸಿದ ಆಂಕೋಲಜಿ ಎಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆಗಳ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಮಣಿಪಾಲ್ ಪೆಲ್ತ್ ಎಂಟರ್‌ಪ್ರೈಸಸ್‌ನ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಎಂಸಿಸಿಸಿಸಿ ಅಭಿವೃದ್ಧಿ ಪಡಿಸಿದ ದಾಖಲೆಗಳು ಒಂದು ವೈವಿಧ್ಯಮಯ, ಬಹು ವ್ಯವಸ್ಥಿಔತ ಹಾಗೂ ಬಹುಶಿಸ್ತಿನ ಕ್ಯಾನ್ಸರ್ ದಾಖಲೆಯಾಗಿದೆ ಎಂದರು.
ಮಣಿಪಾಲ ಮಾಹೆ ವಿವಿಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್, ಕೆಎಂಸಿ ಮಾರುಕಟ್ಟೆ ವಿಭಾಗ ಅಭಿವೃದ್ಧಿ ಪಡಿಸಿದ ‘ಪಿಂಕ್ ಎಂಬ ಸ್ತನ ಕ್ಯಾನ್ಸರ್ ಅಪ್ಲಿಕೇಷನ್’ಗೆ ಚಾಲನೆ ನೀಡಿ ಮಾತನಾಡಿ, ಇದು ಸ್ವಪರೀಕ್ಷೆಗೆ ಸನ್ನೆ ಮತ್ತು ಮಾಹಿತಿಯನ್ನು ನೀಡಲಿದ್ದು, ನಿಯಮಿತ ತಪಾಸಣೆ ಹಾಗೂ ನೇಮಕಾತಿಗಳನ್ನು ಸಂಕ್ರಿಯಗೊಳಿಸುತ್ತದೆ ಎಂದರು.
ಮಾಹೆಯ ಸಹ ಉಪಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್ ಅವರು ಕೆಎಸಿಯ ಮಕ್ಕಳ ರಕ್ತಶಾಸ್ತ್ರ ಹಾಗೂ ಅಂಕೋಲಾಜಿ ವಿಭಾಗ ಅಭಿವೃದ್ಧಿ ಪಡಿಸಿದ ‘ಡೊನೇಟ್ ಲೈಫ್ ಆ್ಯಪ್’ಗೆ ಚಾಲನೆ ನೀಡಿದರು. ಕೆಎಂಸಿಯ ಕಾರ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಉಪಸ್ಥಿತರಿದ್ದರು.
ಎಂಸಿಸಿಸಿಸಿಯ ಸಂಯೋಜಕ ಡಾ.ನವೀನ್ ಎಸ್.ಸಲೀನ್ಸ್ ಅವರು ಕೇಂದ್ರ ಕಳೆದೆರಡು ವರ್ಷಗಳಲ್ಲಿ ನಡೆದು ಬಂದ ದಾರಿಯನ್ನು ಅವಲೋ ಕಿಸಿದರು. ಕೆಎಂಸಿಯ ಡೀನ್ ಡಾ.ಶರತ್‌ಕುಮಾರ್ ರಾವ್ ಸ್ವಾಗತಿಸಿದರೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು.
ನ್ಯೂಕ್ಲಿಯರ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸುಮಿತ್ ಎಸ್ ಮಾಲಾಪುರೆ ಕಾರ್ಯಕ್ರಮ ನಿರೂಪಿಸಿದರು.







