ಸಿದ್ದರಾಮಯ್ಯನವರೇ, ಆಸ್ಥಾನದ ವಿದೂಷಕನಂತೆ ವರ್ತಿಸಬೇಡಿ: ಎಚ್.ವಿಶ್ವನಾಥ್

ಮೈಸೂರು,ಅ.23: ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕನಂತೆ ವರ್ತಿಸಬೇಡಿ. ನೀವು ಒಬ್ಬ ರಾಜಕೀಯ ಮುತ್ಸದ್ದಿಯಂತೆ ವರ್ತನೆ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಟ್ವೀಟ್ ಮಾಡಿರುವುದಕ್ಕೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.
'ಹೌದು ಹುಲಿಯಾ' ಎನ್ನುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. 'ಕನಕಪುರ ಬಂಡೆ' ಅಂದಾಗ ಡಿ.ಕೆ ಶಿವಕುಮಾರ್ ಸದನದಲ್ಲಿ ಖುಷಿಪಟ್ಟಿದ್ದಾರೆ. ಇವೆಲ್ಲ ನಿಮ್ಮ ಅಭಿಮಾನಿಗಳು ಕೊಟ್ಟಿರುವ ಬಿರುದುಗಳು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟಿರುವ ಬಿರುದುಗಳಲ್ಲ ಎಂದು ತಿರುಗೇಟು ನೀಡಿದ ಅವರು, ಸಿದ್ಧರಾಮಯ್ಯನವರೇ ಈಗ ನೀವು ಬಳಸಿದ ಭಾಷೆಯನ್ನು ಒಪ್ಪುವಂತಹುದಲ್ಲ. ಅದು ಕಾಡಿನ ಜನರಿಗೆ ನೀವು ಮಾಡಿರುವಂತಹ ಅವಮಾನವಾಗಿದೆ. ಸಿದ್ದರಾಮಯ್ಯನವರಿಗೆ ಏಕವಚನ, ಬಹುವಚನ ಕೂಡ ಗೊತ್ತಿಲ್ಲ. ಆದರೆ, ಅವರು ಬೇರೆಯವರಿಗೆ ಸಂಧಿ ಪಾಠ ಮಾಡುತ್ತಾರೆ. ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ. ಜನ ನಿಮ್ಮ ತಲೆ ಖಾಲಿಯಾಗಿ ವಿವೇಚನೆ ಇಲ್ಲ ಎಂದುಕೊಳ್ಳುತ್ತಾರೆ ಎಂದು ವಿಶ್ವನಾಥ್ ಟೀಕಿಸಿದರು.





