ಪಟಾಕಿ ಸಿಡಿತ, ಪ್ರತಿಕೃತಿ ದಹನದಿಂದ ವಾಯುಮಾಲಿನ್ಯ
ದಿಲ್ಲಿ ಸರಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುಪ್ರೀಂ ಆದೇಶ

ಹೊಸದಿಲ್ಲಿ,ಅ.23: ಪಟಾಕಿಗಳನ್ನು ಸಿಡಿಸುವುದು ಹಾಗೂ ರಾವಣ ಪ್ರತಿಕೃತಿಗಳ ದಹನವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಯನ್ನು, ಪ್ರಾತಿನಿಧಿಕ ದೂರು ಎಂಬುದಾಗಿ ಪರಿಗಣಿಸಬೇಕೆಂದು ದಿಲ್ಲಿ ಉಚ್ಚ ನ್ಯಾಯಾಲಯವು, ಎಎಪಿ ಸರಕಾರ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಗೆ ನಿರ್ದೇಶ ನೀಡಿದೆ.
ಈ ದೂರಿನ ಬಗ್ಗೆ ಪ್ರಸಕ್ತ ಕಾನೂನು, ನಿಯಮಾವಳಿಗಳು ಹಾಗೂ ವಾಸ್ತವಿಕತೆಗೆ ಅನ್ವಯವಾಗುವಂತಹ ಸರಕಾರದ ನೀತಿಗೆ ಅನುಸಾರವಾಗಿ ನಿರ್ಧಾರವನ್ನು ಕೈಗೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನೊಳಗೊಂಡ ನ್ಯಾಯಪೀಠವು ದಿಲ್ಲಿ ಸರಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಹಾಗೂ ಸಿಪಿಸಿಬಿಗೆ ಸೂಚನೆ ನೀಡಿದೆ.
ಈ ಅಹವಾಲಿನ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಾಗ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಗಮನದಲ್ಲಿರಿಸಿಕೊಳ್ಳುವಂತೆಯೂ ನ್ಯಾಯಪೀಠ ತಿಳಿಸಿದೆ.
ಕೊರೋನ ಸಾಂಕ್ರಾಮಿಕ ರೋಗ ಹಾವಳಿಯ ಈ ಸನ್ನಿವೇಶದಲ್ಲಿ, ವಾಯು ಮಾಲಿನ್ಯದಲ್ಲಿ ಯಾವುದೇ ರೀತಿಯ ಹೆಚ್ಚಳವಾಗುವುದನ್ನು ತಡೆಯಲು ಪ್ರತಿಕೃತಿಗಳ ದಹನ ಅಥವಾ ಪಟಾಕಿಗಳ ಸಿಡಿಸುವುದನ್ನು ನಿಷೇಧಿಸುವಂತೆ ಡಿಡಿಎಂಎ ಹಾಗೂ ಸಿಪಿಸಿಬಿಗ ಆದೇಶ ನೀಡಬೇಕೆಂದು ಕೋರಿ ನ್ಯಾಯವಾದಿಗಳಾದ ಚೇತನ್ ಹಸೀಜಾ ಹಾಗೂ ಸಾಹಿಲ್ ಶರ್ಮಾ ಮನವಿ ಸಲ್ಲಿಸಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಕೃತಿಗಳು ಹಾಗೂ ಪಟಾಕಿಗಳ ಮಾರಾಟಕ್ಕೂ ನಿಷೇಧ ವಿಧಿಸುವಂತೆಯೂ ಅವರು ಕೋರಿದ್ದರು. ಸೆಪ್ಟೆಂಬರ್ 25ರಿಂದೀಚೆಗೆ ದಿಲ್ಲಿಯ ಆಸು ಪಾಸಿನ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆಗಳನ್ನು ಸುಡುವ ಪದ್ಧತಿಯಿಂದಾಗಿ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕದ ಹಾವಳಿ ಸಂದರ್ಭದಲ್ಲಿ ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ಅವರು ಲಾದಿಸಿದ್ದು.
ಇದರ ಜೊತೆಗೆ ಪ್ರತಿಕೃತಿಗಳ ದಹನ ಹಾಗೂ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಬರುವ ದಸರಾ ಹಾಗೂ ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ರಾಜಧಾನಿಯಲ್ಲಿ ವಾಯುಮಾಲಿನ್ಯದ ಗುಣಮಟ್ಟವು ಇನ್ನಷ್ಟು ಕುಸಿಯಲಿದೆ ಎಂದು ಅರ್ಜಿದಾರರು ವಾದಿಸಿದ್ದರು.







