ದಿಲ್ಲಿ ಗಲಭೆ ಸಂಚಿನ ಆರೋಪಿ ಸಿಮ್ ಸೇಲ್ಸ್‌ಮ್ಯಾನ್‌ಗೆ ಜಾಮೀನು

ಹೊಸದಿಲ್ಲಿ,ಆ.23: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಭೀಕರ ಹಿಂಸಾಚಾರದ ಹಿಂದಿರುವ ಸಂಚಿನ ಭಾಗವಾಗಿದ್ದನೆಂಬ ಆರೋಪ ಎದುರಿಸುತ್ತಿರುವ ಸಿಮ್‌ಕಾರ್ಡ್ ಸೇಲ್ಸ್‌ಮ್ಯಾನ್ ಒಬ್ಬಾತನಿಗೆ ದಿಲ್ಲಿ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ದಿಲ್ಲಿ ಗಲಭೆಗೆ ಸಂಬಂಧಿಸಿ ಆರೋಪಿ ಫೈಝಾನ್ ಖಾನ್‌ನನ್ನು ಜುಲೈ 29ರಂದು ಪೊಲೀಸರು ಬಂಧಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಆತನ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ದ ವಿದ್ಯಾರ್ಥಿ ಆಸೀಫ್ ಇಕ್ಬಾಲ್ ತಾನಹಾ ಎಂಬಾತ ನಕಲಿ ಗುರುತಿನಲ್ಲಿ ಸಿಮ್‌ಕಾರ್ಡ್ ನೀಡುವಂತೆ ಫೈಝಾನ್ ಖಾನ್‌ನನ್ನು ಕೇಳಿದ್ದನೆಂದು ದಿಲ್ಲಿ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಆಪಾದಿಸಿದ್ದಾರೆ. ತಾನಾಹನ ವಿರುದ್ದವೂ ಯುಎಪಿಎ ಅಡಿ ದೋಷಾರೋಪ ದಾಖಲಿಸಲಾಗಿದ್ದು, ಆತನನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.
ಕಳೆದ ಜನವರಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಖಾನ್‌ನಿಂದ ಸಿಮ್‌ಕಾರ್ಡ್ ಪಡೆದುಕೊಂಡು ಅದನ್ನು ದಿಲ್ಲಿ ಗಲಭೆ ಸಂಚಿನ ಇನ್ನೋರ್ವ ಆರೋಪಿ, ಜಾಮಿಯಾ ಮಿಲಿಯಾ ವಿದ್ಯಾರ್ಥಿನಿ ಸಫೂರಾ ಝರ್ಗಾರ್‌ಗೆ ಹಸ್ತಾಂತರಿಸಿದ್ದನೆಂದು ಪೊಲೀಸರು ಆರೋಪಿಸಿದ್ದರು. ಝರ್ಗಾರ್‌ಗೆ ಜೂನ್‌ನಲ್ಲಿ ಜಾಮೀನು ದೊರೆತಿತ್ತು.
ಸಾಕ್ಷಿದಾರರ ಹೇಳಿಕೆ ಆಧಾರದಲ್ಲಿ ಖಾನ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದ್ದು, ಅದನ್ನು ಸಾಬೀತುಪಡಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲವೆಂಬುದು ನ್ಯಾಯಾಲಯ ಗಮನಿಸಿದೆಯೆಂದು ದಿಲ್ಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ತನ್ನ ಆದೇಶದಲ್ಲಿ ಹೇಳಿದ್ದಾರೆ.







