ಮ್ಯಾನ್ಮಾರ್: ಲಾಕ್ಡೌನ್ ವೇಳೆ ಇಲಿ, ಹಾವುಗಳನ್ನು ತಿಂದು ಬದುಕುತ್ತಿರುವ ಜನರು
ಸಾಂದರ್ಭಿಕ ಚಿತ್ರ
ಯಾಂಗನ್ (ಮ್ಯಾನ್ಮಾರ್), ಅ. 23: ಮ್ಯಾನ್ಮಾರ್ಗೆ ಮಾರ್ಚ್ನಲ್ಲಿ ಕೊರೋನ ವೈರಸ್ನ ಮೊದಲ ಅಲೆ ಅಪ್ಪಳಿಸಿದಾಗ, 36 ವರ್ಷದ ಮಹಿಳೆ ಮಾ ಸೂ ತನ್ನ ಸಲಾಡ್ ಮಾರುವ ಗೂಡಂಗಡಿಯನ್ನು ಮುಚ್ಚಿದರು ಹಾಗೂ ಆಹಾರ ಖರೀದಿಸಲು ತನ್ನ ಚಿನ್ನ ಮತ್ತು ಒಡವೆಗಳನ್ನು ಅಡವಿಟ್ಟರು.
ಸೆಪ್ಟಂಬರ್ನಲ್ಲಿ ಸಾಂಕ್ರಾಮಿಕದ ಎರಡನೇ ಅಲೆ ಅಪ್ಪಳಿಸಿದಾಗ ಸರಕಾರ ಮತ್ತೊಮ್ಮೆ ಜನರಿಗೆ ಮನೆಯಲ್ಲೇ ಉಳಿಯುವಂತೆ ಆದೇಶಿಸಿತು. ಆಗ ಮಾ ಸೂ ತನ್ನ ಗೂಡಂಗಡಿಯನ್ನು ಇನ್ನೊಮ್ಮೆ ಮುಚ್ಚಿದರು ಹಾಗೂ ಆಹಾರ ಖರೀದಿಗಾಗಿ ತನ್ನ ಬಟ್ಟೆಗಳು, ತಟ್ಟೆಗಳು ಮತ್ತು ಕೊಡಗಳನ್ನು ಮಾರಿದರು.
ಇನ್ನು ಮಾರಲು ಏನೂ ಇಲ್ಲದಿದ್ದಾಗ, ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಅವರ ಗಂಡ ಅವರು ವಾಸಿಸುತ್ತಿರುವ ಯಾಂಗನ್ ಹೊರವಲಯದ ಕೊಳೆಗೇರಿಯ ಚರಂಡಿಗಳಲ್ಲಿ ಆಹಾರದ ಶೋಧಕ್ಕೆ ಇಳಿದರು.
‘‘ಜನರು ಇಲಿಗಳು ಮತ್ತು ಹಾವುಗಳನ್ನು ತಿನ್ನುತ್ತಿದ್ದಾರೆ’’ ಎಂದು ಕಣ್ಣಿನಲ್ಲಿ ನೀರು ಹರಿಸುತ್ತಾ ಮಾ ಸೂ ಹೇಳಿದರು. ‘‘ಆದಾಯವಿಲ್ಲದ ಅವರು ಅವುಗಳನ್ನು ತಿನ್ನಬೇಕಾಗಿದೆ ಹಾಗೂ ತಮ್ಮ ಮಕ್ಕಳಿಗೂ ತಿನ್ನಿಸಬೇಕಾಗಿದೆ’’ ಎಂದು ಅವರು ಹೇಳುತ್ತಾರೆ.
ತಮ್ಮ ಹಸಿವನ್ನು ಇಂಗಿಸುವುದಕ್ಕಾಗಿ ಈ ಕೊಳೆಗೇರಿಯ ಜನರು ರಾತ್ರಿ ತಮ್ಮ ಗುಡಿಸಲಿನ ಹಿಂಭಾಗದಲ್ಲಿ ಬೆಳೆದಿರುವ ಪೊದೆಗಳಲ್ಲಿ ಹರಿದಾಡುವ ಹಾವುಗಳಿಗಾಗಿ ಟಾರ್ಚ್ ಬೆಳಕು ಹಿಡಿದು ಕಾಯುತ್ತಿರುತ್ತಾರೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗ್ರಾಮೀಣ ಪ್ರದೇಶಗಳ ಜನರು ಇಲಿಗಳು, ಹಾವುಗಳು ಮತ್ತು ಕೀಟಗಳನ್ನು ಹಿಡಿದು ತಿಂದರೆ, ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸಿಸುವ ಜನರು ಏನು ಸಿಗುತ್ತದೋ ಅದನ್ನು ತಿನ್ನಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.
ಮ್ಯಾನ್ಮಾರ್ನಲ್ಲಿ 40,000ಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸುಮಾರು 1,000 ಮಂದಿ ಮೃತಪಟ್ಟಿದ್ದಾರೆ.